ADVERTISEMENT

ಅಡುಗೆ ಅನಿಲ ದುಬಾರಿ: ಸಾರ್ವಜನಿಕರಿಂದ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 14:34 IST
Last Updated 1 ಮಾರ್ಚ್ 2023, 14:34 IST
ಅಡುಗೆ ಅನಿಲ ಸಿಲಿಂಡರ್
ಅಡುಗೆ ಅನಿಲ ಸಿಲಿಂಡರ್   

ತುಮಕೂರು: ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ₹ 50 ಹೆಚ್ಚಳ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಈಗಾಗಲೇ ದಿವಾಳಿಯಾಗಿರುವ ಜನರ ಮೇಲೆ ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ದರ ಹೆಚ್ಚಳ ಮಾಡಿರುವುದನ್ನು ಎಸ್‍ಯುಸಿಐ (ಕಮ್ಯುನಿಸ್ಟ್) ಜಿಲ್ಲಾ ಕಾರ್ಯದರ್ಶಿ ಎಸ್.ಎನ್.ಸ್ವಾಮಿ ಖಂಡಿಸಿದ್ದಾರೆ.

ಕಳೆದ 12 ತಿಂಗಳಲ್ಲಿ 6ನೇ ಬಾರಿ ಏರಿಕೆ ಮಾಡಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅಡುಗೆ ಅನಿಲದ ಸಬ್ಸಿಡಿಯನ್ನು ಶೇ 75ರಷ್ಟು ಕಡಿತ ಮಾಡಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಜಾಗತಿಕವಾಗಿ ಕಚ್ಚಾ ತೈಲದ ದರ ಇಳಿಕೆಯಾಗಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೂ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.

ADVERTISEMENT

ಬಡವರಿಗೆ ‘ಉಜ್ವಲ’ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ ಉಜ್ವಲ ಯೋಜನೆ ಫಲಾನುಭವಿಗಳು ಕೂಡ ಮಾರುಕಟ್ಟೆ ದರ ಕೊಟ್ಟು ಸಿಲಿಂಡರ್ ಖರೀದಿಸಬೇಕಾಗಿದ್ದು, ಇದು ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ₹352 ಏರಿಕೆ ಮಾಡಿದ್ದು, ಹೆಚ್ಚಳದ ಹೊರೆಯನ್ನು ಹೋಟೆಲ್‌, ಮತ್ತಿತರ ಉದ್ಯಮಗಳ ಮಾಲೀಕರು ಜನರಿಗೆ ವರ್ಗಾಯಿಸುತ್ತಾರೆ. ಇದರಿಂದ ಪರೋಕ್ಷ ತೆರಿಗೆಗಳ ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.