ADVERTISEMENT

ತುಮಕೂರು: ಮತಾಂತರ ನಿಷೇಧ ಕಾಯ್ದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 7:49 IST
Last Updated 20 ನವೆಂಬರ್ 2021, 7:49 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಕ್ರಿಶ್ಚಿಯನ್ ಸಮುದಾಯದ ಪ್ರಮುಖರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಕ್ರಿಶ್ಚಿಯನ್ ಸಮುದಾಯದ ಪ್ರಮುಖರು   

ತುಮಕೂರು: ರಾಜ್ಯ ಸರ್ಕಾರ ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆಯನ್ನು ಕೈಬಿಡಬೇಕು ಎಂದು ಸಮುದಾಯದ ಮುಖಂಡರು, ಪಾದ್ರಿಗಳು ಇತರರು ಒತ್ತಾಯಿಸಿದರು.

ಕ್ರಿಶ್ಚಿಯನ್ ಸಮುದಾಯದ ಮುಖಂಡರು ಸಿಎಸ್‌ಐ ಚರ್ಚ್‌ನ ಬಿಷಪ್ ಗಿಲ್ ದೇವಾಲಯದ ಬಳಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು. ನಂತರ ಮೌನ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಹಿಂದುಳಿದ ವರ್ಗಗಳ ಇಲಾಖೆ ಪ್ರಸ್ತಾಪಿಸಿರುವ ಕ್ರೈಸ್ತ ಧಾರ್ಮಿಕ ಸಂಸ್ಥೆಯ ಗಣತಿ ಕಾರ್ಯವನ್ನು ಕೈಬಿಡ
ಬೇಕು ಎಂದು ತುಮಕೂರು ಕ್ಷೇತ್ರದ ಸಿಎಸ್‍ಐ ಸಭೆಗಳ ಕ್ಷೇತ್ರಾಧ್ಯಕ್ಷ ಮನೋ
ಜ್ ಕುಮಾರ್ ಈ ಸಂದರ್ಭದಲ್ಲಿ ಆಗ್ರಹಿಸಿದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಮತಾಂತರದ ಹೆಸರಿನಲ್ಲಿ ಕ್ರೈಸ್ತರ ಮೇಲಿನ ದಬ್ಬಾಳಿಕೆ, ದೌರ್ಜನ್ಯಗಳು ಹೆಚ್ಚಾಗಿವೆ. ಒಂದೆರಡು ಘಟನೆಗಳನ್ನು ಮುಂದಿಟ್ಟುಕೊಂಡು, ಅಪ್ಪಟ ಭಾರತೀಯರಾಗಿರುವ ಕ್ರಿಶ್ಚಿಯನ್ ಸಮುದಾಯವನ್ನು ಅಸ್ಪೃಶ್ಯರಂತೆನೋಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿ ಸ್ವಯಂ ಪ್ರೇರಣೆಯಿಂದ ಯಾವುದೇ ಮತವನ್ನು ಸ್ವೀಕರಿಸಲು ಅವಕಾಶವಿದೆ. ಧಾರ್ಮಿಕ ಕೇಂದ್ರ ತೆರೆದು ಶಾಂತಿಯುತವಾಗಿ ನಡೆಸಿಕೊಂಡು ಹೋಗಲು ಅವಕಾಶ ನೀಡಲಾಗಿದೆ. ಬೇಕಾದ ಮತ, ಧರ್ಮದಲ್ಲಿ ಜೀವಿಸಲು ಅವಕಾಶವಿದ್ದರೂ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿರುವುದು ಸಂವಿಧಾನ ವಿರೋಧಿಯಾಗಿದೆಎಂದು ಹೇಳಿದರು.

ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿಲ್ಲ. ಅವರು ತಮ್ಮ ಕಷ್ಟ ನಿವಾರಣೆಯಾಗಿದ್ದರಿಂದ ಕೈಸ್ತನ ಅನುಯಾಯಿಯಾಗಿದ್ದಾರೆ. ಮೊದಲು ಶಾಸಕರು ತಮ್ಮ ತಾಯಿಯನ್ನು ಭೇಟಿಯಾಗಿ ಮಾತನಾಡಲಿ, ನಿಜಾಂಶ ತಿಳಿಯುತ್ತದೆ. ಅದನ್ನು ಬಿಟ್ಟು ಜನರಿಗೆ ತಪ್ಪು ಭಾವನೆ ಬರುವಂತೆ ನಡೆದುಕೊಳ್ಳುವುದು ಶೋಭೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚರ್ಚ್‍ಗಳ ಮುಖ್ಯಸ್ಥರಾದ ಜೇಮ್ಸ್ ಪ್ರಭು, ಸ್ವತಂತ್ರ ಚರ್ಚ್‍ನ ಜಾಯ್‍ಕುಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.