ADVERTISEMENT

ಬಿಎಸ್‌ಎನ್‌ಎಲ್ ಖಾಸಗೀಕರಣಕ್ಕೆ ವಿರೋಧ: ಎಚ್.ನರೇಶ್‍ರೆಡ್ಡಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:16 IST
Last Updated 19 ಏಪ್ರಿಲ್ 2021, 4:16 IST
ತುಮಕೂರಿನಲ್ಲಿ ಬಿಎಸ್‍ಎನ್‍ಎಲ್ ಸಂಸ್ಥಾಪನಾ ದಿನಾಚರಣೆ ನಡೆಯಿತು
ತುಮಕೂರಿನಲ್ಲಿ ಬಿಎಸ್‍ಎನ್‍ಎಲ್ ಸಂಸ್ಥಾಪನಾ ದಿನಾಚರಣೆ ನಡೆಯಿತು   

ತುಮಕೂರು: ಬಿಎಸ್‍ಎನ್‍ಎಲ್ ಸಾರ್ವಜನಿಕ ಸಂಸ್ಥೆಯಾಗಿದ್ದು, ಈ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಎಂದು ಬಿಎಸ್‍ಎನ್‍ಎಲ್ ನೌಕರರ ಯೂನಿಯನ್ ರಾಜ್ಯ ಉಪಾಧ್ಯಕ್ಷ ಎಚ್.ನರೇಶ್‍ರೆಡ್ಡಿ ಆಗ್ರಹಿಸಿದರು.

ಬಿಎಸ್‍ಎನ್‍ಎಲ್ ನೌಕರರ ಯೂನಿಯನ್‍ ಆರಂಭವಾಗಿ 20 ವರ್ಷಗಳು ಪೂರೈಸಿದ್ದು, ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಬಿ.ಆರ್.ಅಂಬೇಡ್ಕರ್ 130ನೇ ಜಯಂತಿ, ಬಾಬು ಜಗಜೀವನ ರಾಂ 114ನೇ ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬಿಎಸ್‍ಎನ್‍ಎಲ್ ಬೆಳವಣಿಗೆಗೆ ಕೇಂದ್ರ ಸರ್ಕಾರ 4ಜಿ ತರಂಗಾಂತರವನ್ನು ಮಾರುಕಟ್ಟೆಗೆ ತರುವ ಮೂಲಕ ಅಭಿವೃದ್ಧಿಗೆ ಪೂಕರವಾಗಿ ಯೋಚಿಸಬೇಕು. ಖಾಸಗಿ ಕಂಪನಿಗಳು ಈಗಾಗಲೇ 5ಜಿ ಇಂಟರ್‌ನೆಟ್‌ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿವೆ. ನಮ್ಮಲ್ಲಿ ಇನ್ನೂ 4ಜಿ ಇಂಟರ್‌ನೆಟ್ ಲಭ್ಯತೆಗೆ ಕೇಂದ್ರ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಸಂಸ್ಥೆ ಉಳಿಸಲು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.

ADVERTISEMENT

ನೌಕರರ ಯೂನಿಯನ್‍ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಶಿವರಾಮರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯರಾದ ಗೌರಿ ರವಿಕುಮಾರ್, ಪ್ರಮೀಳ, ಮಂಜುಳ, ಕೆಂಪಮ್ಮ, ಸುರೇಶ್, ಎಂ.ರಾಮಚಂದ್ರ ಭಾಗವಹಿಸಿದ್ದರು.

ಯೂನಿಯನ್ ಸಂಸ್ಥಾಪನ ದಿನದ ಅಂಗವಾಗಿ ಹೊರ ತಂದಿರುವ ನಂಬೂದರಿ ಅವರ ‘ಆಟೋ ಬಯೋಗ್ರಫಿ’ ಪುಸ್ತಕವನ್ನು ಬಿಎಸ್‍ಎನ್‍ಎಲ್‍ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ಎಂ.ಸಿ.ಸುರೇಶ್ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.