ADVERTISEMENT

ಪಾವಗಡ: ಆದರ್ಶ ಶಾಲೆ ಸ್ಥಳಾಂತರಕ್ಕೆ ವಿರೋಧ, ಪೋಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 5:40 IST
Last Updated 23 ಅಕ್ಟೋಬರ್ 2021, 5:40 IST
ಪಾವಗಡದಿಂದ ತಾಲ್ಲೂಕಿನ ಅರಸೀಕೆರೆಗೆ ಆದರ್ಶ ವಿದ್ಯಾಲಯವನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಪ್ರಮುಖರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು
ಪಾವಗಡದಿಂದ ತಾಲ್ಲೂಕಿನ ಅರಸೀಕೆರೆಗೆ ಆದರ್ಶ ವಿದ್ಯಾಲಯವನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಪ್ರಮುಖರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು   

ಪಾವಗಡ: ತಾಲ್ಲೂಕಿನ ಅರಸೀಕೆರೆಗೆ ಆದರ್ಶ ವಿದ್ಯಾಲಯವನ್ನು ಸ್ಥಳಾಂತರಿಸುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದೇಶ ಖಂಡಿಸಿ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಪ್ರಮುಖರು ತಹಶೀಲ್ದಾರ್ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಆದರ್ಶ ವಿದ್ಯಾಲಯವನ್ನು 4ರಿಂದ 5 ಕಿ.ಮೀ ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಿಸಬೇಕು ಎಂದು ನಿಯಮ ರೂಪಿಸಿ ಮಂಜೂರು ಮಾಡಲಾಗಿದೆ. ಆದರೆ ಇದೀಗ ಪಟ್ಟಣದ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದ ಅರಸೀಕೆರೆಗೆ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳು ಆದೇಶ ನೀಡಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಪ್ರತಿಭಟನೆ ನಿರತರು
ಆರೋಪಿಸಿದರು.

ಪಟ್ಟಣದಲ್ಲಿ ಶಾಲೆ ಇದ್ದರೆ ನಿಡಗಲ್, ನಾಗಲಮಡಿಕೆ, ಕಸಬಾ, ವೈ.ಎನ್ ಹೊಸಕೋಟೆ ಹೋಬಳಿಗಳ ವಿದ್ಯಾರ್ಥಿಗಳಿಗೆ ಅನುಕೂಲ
ವಾಗುತ್ತದೆ. ಆದರೆ ಅರಸೀಕೆರೆಗೆ ಸ್ಥಳಾಂತರಿಸುವುದರಿಂದ ನಾಗಲಮಡಿಕೆ, ಕಸಬಾ, ವೈ.ಎನ್ ಹೊಸಕೋಟೆ ಹೋಬಳಿಗಳ ವಿದ್ಯಾರ್ಥಿಗಳು 70ರಿಂದ 80 ಕಿ.ಮೀ ನಿತ್ಯ ಪ್ರಯಾಣಿಸಬೇಕು ಎಂದು ದೂರಿದರು.

ADVERTISEMENT

ವಸತಿ ರಹಿತ ಶಾಲೆಯಾಗಿರುವುದರಿಂದ ನೂರಾರು ವಿದ್ಯಾರ್ಥಿನಿಯರು ಮನೆಯಿಂದ ಶಾಲೆಗೆ ಓಡಾಡಲು ಸಮಸ್ಯೆಯಾಗುತ್ತದೆ. ಪ್ರಯಾಣ ವೆಚ್ಚ, ಸಮಯ ಎಲ್ಲವೂ ವ್ಯರ್ಥವಾಗಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ ಎಂದು ಸಮಸ್ಯೆ ಹೇಳಿಕೊಂಡರು.

ಪಟ್ಟಣದಲ್ಲಿ ನವೀಕರಣವಾಗುತ್ತಿರುವ ಹಳೆಯ ಪ್ರಥಮ ದರ್ಜೆ ಕಾಲೇಜು ಕೊಠಡಿಗಳಲ್ಲಿ ತರಗತಿಗಳನ್ನು ಮುಂದುವರೆಸಬೇಕು. ಅರಸೀಕೆರೆಗೆ ಸ್ಥಳಾಂತರಿಸುವ ಆದೇಶ ರದ್ದುಪಡಿಸಬೇಕು ಎಂದರು.

ತಹಶೀಲ್ದಾರ್ ಕೆ.ಆರ್.ನಾಗರಾಜು ಅವರಿಗೆ ಮನವಿ ಸಲ್ಲಿಸಲಾಯಿತು.

ಬೇಡಿಕೆ ಈಡೇರಿಸದಿದ್ದಲ್ಲಿ ಅಕ್ಟೋಬರ್ 25ರಿಂದ 27ರವರೆಗೆ ತಹಶಿಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಿರಿ, ಮನು ಮಹೇಶ್, ಮಮತಾ, ಪ್ರದೀಪ್, ದ್ರಾಕ್ಷಾಯಿಣಿ, ವೆಂಕಟೇಶ್, ಜಯರಾಮ, ನಾಗರಾಜು, ಅರುಣ, ರೇಣುಕಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.