ತುಮಕೂರು: ವಿಪ್ರ ಸಮುದಾಯದ ಮಹಿಳೆಯರು ಉದ್ಯಮಿಗಳಾಗುವತ್ತ ಚಿಂತಿಸಬೇಕು ಎಂದು ಕೈಗಾರಿಕೋದ್ಯಮಿ ಪದ್ಮ ಶೇಷಾದ್ರಿ ಸಲಹೆ ಮಾಡಿದರು.
ನಗರದ ಶೃಂಗೇರಿ ಶಂಕರ ಮಠದಲ್ಲಿ ಗುರುವಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ವಿಪ್ರ ಮಹಿಳಾ ಸಂತೆ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಯೋಜನೆ ರೂಪಿಸಿ ಉದ್ಯಮ ಹಾಗೂ ವ್ಯಾಪಾರ ವಹಿವಾಟು ಆರಂಭಿಸಬೇಕು. ಯೋಜನೆ ಇಲ್ಲದೆ ಯಾವುದೇ ಕಾರ್ಯ ಮಾಡುವುದು ಸೂಕ್ತವಲ್ಲ. ಇಡೀ ದೇಶವೇ ಯುವಕರ ಕೈಯಲ್ಲಿದ್ದು, ಯುವಕರ ಬಳಿ ಸೂಕ್ತವಾದ ಯೋಜನೆಗಳಿದ್ದರೆ ಹೂಡಿಕೆದಾರರು ಬಂಡವಾಳ ತೊಡಗಿಸಲು ಮುಂದೆ ಬರುತ್ತಾರೆ ಎಂದರು.
ಕೆಲಸಕ್ಕಾಗಿ ಕೈ ಚಾಚುವ ಬದಲು ಉದ್ಯೋಗ ಕೊಡುವ ಉದ್ಯಮ ಸ್ಥಾಪಿಸಬಹುದು. ಬ್ಯಾಂಕ್‍ನಿಂದ ಸಾಲ ಪಡೆದು ಉದ್ಯಮ ಸ್ಥಾಪಿಸಿ ಯಶಸ್ಸಿನತ್ತ ಸಾಗಬಹುದು. ಒದಗಿಸುವ ಸೇವೆ ಹಾಗೂ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ‘ಎಲ್ಲ ವಿಪ್ರ ಸಮುದಾಯದವರು ಮಹಾಸಭಾ ಸದಸ್ಯತ್ವ ಪಡೆದುಕೊಳ್ಳಬೇಕು’ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ.ಹರೀಶ್, ಜಿಲ್ಲಾ ಉಪಾಧ್ಯಕ್ಷೆ ಸುಭಾಷಿಣಿ ರವೀಶ್, ಜಂಟಿ ಕಾರ್ಯದರ್ಶಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕ ಜಿ.ಕೃಷ್ಣಮೂರ್ತಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಶ್ರೀದೇವಿ ಅನಂತರಾಮ್, ಸೌಮ್ಯ ರವಿ, ಜೆ.ಶ್ರೀಹರಿ, ಉಷಾರಾಣಿ, ಗುರುಪ್ರಕಾಶ್ ಬಳ್ಳುಕರಾಯ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.