ADVERTISEMENT

ತುಮಕೂರು ಮಹಾನಗರ ಪಾಲಿಕೆ: ಹೊಸತನವಿಲ್ಲದ ಸಾಮಾನ್ಯ ಬಜೆಟ್

ತುಮಕೂರು ಮಹಾನಗರ ಪಾಲಿಕೆಯ 2020–21ನೇ ಸಾಲಿನ ಮುಂಗಡಪತ್ರ ಮಂಡನೆ

​ಪ್ರಜಾವಾಣಿ ವಾರ್ತೆ
Published 7 ಮೇ 2020, 12:13 IST
Last Updated 7 ಮೇ 2020, 12:13 IST
ಬಜೆಟ್ ಮಂಡಿಸಿದ ಮಹೇಶ್
ಬಜೆಟ್ ಮಂಡಿಸಿದ ಮಹೇಶ್   

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಗುರುವಾರ ಮಂಡನೆಯಾದ 2020–21ನೇ ಸಾಲಿನ ಬಜೆಟ್‌ ‘ಸರ್ವೇ ಸಾಮಾನ್ಯ’ ಎನ್ನುವಂತಿದೆ. ಯಾವುದೇ ಹೊಸ ಘೋಷಣೆ ಮತ್ತು ನಗರದ ಸರ್ವತೋಮುಖ ಅಭಿವೃದ್ಧಿ ವಿಚಾರವಾಗಿ ಹೊಸ ಅಂಶಗಳು ಮತ್ತು ಆಶಯಗಳು ಎದ್ದು ಕಾಣುತ್ತಿಲ್ಲ.

ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಯಡಿ 4, 5,14,15,16,19 ಮತ್ತು 7ನೇ ವಾರ್ಡ್‌ನ ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಇದರ ಜತೆಗೆ 1, 10, 12, 17, 18, 28ನೇ ವಾರ್ಡ್‌ಗಳನ್ನೂ ಸ್ಮಾರ್ಟ್‌ಸಿಟಿ ಯೋಜನೆಯಡಿ ಸೇರಿಸಿ ಅಭಿವೃದ್ಧಿಗೊಳಿಸಲು ವಿಶೇಷ ಪ್ಯಾಕೇಜ್ ಪ್ರಕಟಿಸಲಾಗಿದೆ. ಇದಕ್ಕಾಗಿ ₹ 90 ಲಕ್ಷ ಕಾಯ್ದಿರಿಸಲಾಗಿದೆ. ಈ ಒಂದು ವಿಚಾರ ಬಿಟ್ಟರೆ ಹೇಳಿಕೊಳ್ಳುವಂತಹ ಮಹತ್ವದ ಮುನ್ನೋಟಗಳು ಇಲ್ಲ.

ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್ ಪಾಲಿಕೆ ಸಭಾಂಗಣದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಅಂತರ ಕಾಯ್ದುಕೊಂಡು ಕುಳಿತಿದ್ದರು.

ADVERTISEMENT

ತೆರಿಗೆಗಳು, ಸರ್ಕಾರದ ಅನುದಾನ ಸೇರಿದಂತೆ ವಿವಿಧ ಮೂಲಗಳಿಂದ ಪಾಲಿಕೆಗೆ ₹ 228.84 ಕೋಟಿ ಸಂಪನ್ಮೂಲ ನಿರೀಕ್ಷಿಸಲಾಗಿದೆ. ಇದರಲ್ಲಿ ಸ್ವಂತ ಸಂಪನ್ಮೂಲಗಳಿಂದ (ತೆರಿಗೆ) ₹ 62.5 ಕೋಟಿ, ಸರ್ಕಾರದ ಅನುದಾನ ₹ 140.5 ಕೋಟಿ ನಿರೀಕ್ಷೆ ಹೊಂದಲಾಗಿದೆ. ವಿವಿಧ ಕಾಮಗಾರಿಗಳಿಗಾಗಿ ₹ 224.42 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದೆ. ₹ 3.81 ಕೋಟಿ ಉಳಿತಾಯದ ಅಂಶ ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ.

ಯಥಾಪ್ರಕಾರ ನಗರದ ಮೂಲಸೌಕರ್ಯದ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾ‍ಪಿಸಲಾಗಿದೆ. ಕುಡಿಯುವ ನೀರು, ಆರೋಗ್ಯ, ಬೀದಿ ದೀಪ ನಿರ್ವಹಣೆ, ಒಳಚರಂಡಿ, ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಸ್ಮಾರ್ಟ್‌ ಸಿಟಿಯಿಂದ ಉತ್ತಮ ಸಾರಿಗೆ ವ್ಯವಸ್ಥೆ, ನಗರದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ, 24*7 ನೀರಿನ ಸೌಲಭ್ಯ, ಗ್ಯಾಸ್ ಲೈನ್ ಜೋಡಣೆ, ವಿದ್ಯುತ್ ದೀಪ, ಕೇಬಲ್ ಸಂಪರ್ಕಕ್ಕೆ ಆದ್ಯತೆ ನೀಡುವುದಾಗಿ ಪ್ರಕಟಿಸಲಾಗಿದೆ.

4, 7, 14ನೇ ವಾರ್ಡ್‌ನಲ್ಲಿ ಮಾಂಸದ ಅಂಗಡಿಗಳ ಸ್ಥಳಾಂತರಕ್ಕೆ ₹ 50 ಲಕ್ಷ ಮತ್ತು ತರಕಾರಿ ಮಾರುಕಟ್ಟೆಗಳಿಗೆ ₹ 25 ಲಕ್ಷ ಕಾಯ್ದಿರಿಸಲಾಗಿದೆ.

ಸಕ್ರಮದಿಂದ ಆದಾಯ

ಪ್ರಸಕ್ತ ವರ್ಷ ಹೊಸ ನಲ್ಲಿಗಳ ಜೋಡಣೆಯಿಂದ ₹ 25 ಲಕ್ಷ, ಅನಧಿಕೃತ ನಲ್ಲಿ ಸಕ್ರಮದಿಂದ ₹ 50 ಲಕ್ಷ, ಶುದ್ಧ ಕುಡಿಯುವ ನೀರಿನ ಘಟಕಗಳಿಂದ ₹ 50 ಲಕ್ಷ ಆದಾಯ ಸಂಗ್ರಹ ನಿರೀಕ್ಷಿಸಲಾಗಿದೆ. ಹೊಸ ಯುಜಿಡಿ ಸಂಪರ್ಕ ಹಾಗೂ ಯುಜಿಡಿ ಸಕ್ರಮದಿಂದ ₹ 10 ಲಕ್ಷ ಬೊಕ್ಕಸಕ್ಕೆ ಬರಲಿದೆ.

ಪಾಲಿಕೆ ಆಯುಕ್ತ ಟಿ.ಭೂಬಾಲನ್, ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಪಾಲಿಕೆ ಸದಸ್ಯರು ಹಾಜರಿದ್ದರು.

***

ಪ್ರಮುಖ ಆದಾಯ ನಿರೀಕ್ಷೆ

₹ 30 ಕೋಟಿ
ಕಟ್ಟಡ ಮತ್ತು ಆಸ್ತಿ ತೆರಿಗೆ

₹ 12 ಕೋಟಿ
ಕುಡಿಯುವ ನೀರಿನ ಶುಲ್ಕ

₹ 10 ಕೋಟಿ
ಒಳಚರಂಡಿ ಶುಲ್ಕ– ಹೊಸ ಸಂಪರ್ಕ

₹ 2 ಕೋಟಿ
ವಾಣಿಜ್ಯ ಆಸ್ತಿ ತೆರಿಗೆ

₹ 2 ಕೋಟಿ
ಘನ ತ್ಯಾಜ್ಯದಿಂದ ಆದಾಯ

₹ 10 ಲಕ್ಷ
ಪಾರ್ಕಿಂಗ್‌ ಶುಲ್ಕ

***
ಸರ್ಕಾರದ ಅನುದಾನದ ನಿರೀಕ್ಷೆ

₹ 40 ಕೋಟಿ
ನಗರೋತ್ಥಾನ ನಾಲ್ಕನೇ ಹಂತದ ಅನುದಾನ

₹ 27 ಕೋಟಿ
ಎಸ್‌ಎಫ್‌ಸಿ ವಿದ್ಯುತ್ ಶುಲ್ಕ, ಬೀದಿ ದೀಪ, ನೀರು ಸರಬರಾಜು

₹ 15.97 ಕೋಟಿ
15ನೇ ಹಣಕಾಸು ಆಯೋಗದ ಅನುದಾನ

₹ 16.45 ಕೋಟಿ
ಎಸ್‌ಎಫ್‌ಸಿ ವೇತನ ಅನುದಾನ

₹ 4.45 ಕೋಟಿ
ನಗರದ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ಮುಕ್ತ ನಿಧಿ

***

ನಿರೀಕ್ಷಿತ ವೆಚ್ಚಗಳು

₹ 44.50 ಕೋಟಿ
ನೀರು ಸರಬರಾಜು

₹ 37.79 ಕೋಟಿ
ರಸ್ತೆ, ಚರಂಡಿ ನಿರ್ಮಾಣ, ವೃತ್ತಗಳ ಅಭಿವೃದ್ಧಿ

₹ 39.37 ಕೋಟಿ
ವೈಜ್ಞಾನಿಕ ಕಸ ವಿಲೇವಾರಿ

₹ 16.18 ಕೋಟಿ
ಸಾರ್ವಜನಿಕ ಬೀದಿ ದೀಪ ವ್ಯವಸ್ಥೆ

₹ 3.75
ಪಾಲಿಕೆ ನೂತನ ಕಚೇರಿ ಕಟ್ಟಡ ನಿರ್ಮಾಣ

₹ 2 ಕೋಟಿ
ಉದ್ಯಾನಗಳ ಅಭಿವೃದ್ಧಿ

₹ 2 ಕೋಟಿ
ಇಂದಿರಾ ಕ್ಯಾಂಟೀನ್ ನಿರ್ವಹಣೆ

₹ 55 ಲಕ್ಷ
ಸಮುದಾಯ ಶೌಚಾಲಯ ನಿರ್ಮಾಣ

***

ತೆರಿಗೆ ಹೆಚ್ಚಳವಿಲ್ಲ

ಕೊರೊನಾ ಸಂಕಷ್ಟದ ಕಾರಣ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ತೆರಿಗೆಗಳನ್ನು ಹೆಚ್ಚಳ ಮಾಡಿಲ್ಲ. ಇದು ಸಹಜವಾಗಿ ನಾಗರಿಕರಲ್ಲಿ ಸಂತಸಕ್ಕೂ ಕಾರಣವಾಗಿದೆ.

***

ಪೌರಕಾರ್ಮಿಕರಿಗೆ ಮನೆ

ಗೃಹಭಾಗ್ಯ ಯೋಜನೆಯಡಿ ದಿಬ್ಬೂರು ಬಳಿಯ ಎರಡು ಎಕರೆಯಲ್ಲಿ ಕಾಯಂ ಪೌರಕಾರ್ಮಿಕರಿಗೆ ‘ಜಿ+2’ ಮಾದರಿಯಲ್ಲಿ 52 ಮನೆಗಳ ನಿರ್ಮಾಣಕ್ಕೆ ₹1.50 ಕೋಟಿ ಕಾಯ್ದಿರಿಸಲಾಗಿದೆ. ಪಾಲಿಕೆಯನ್ನು ಕಾಗದ ರಹಿತ ಕಚೇರಿ (ಇ–ಆಡಳಿತ) ತಂತ್ರಜ್ಞಾನ ಅಳವಡಿಕೆಗೆ 30 ಲಕ್ಷ ಮೀಸಲಿಡಲಾಗಿದೆ.

***

ವಾರ್ಡ್ ಕಮಿಟಿಗೆ ₹ 10 ಲಕ್ಷ

ತುಮಕೂರಿನಲ್ಲಿ ವಾರ್ಡ್ ಕಮಿಟಿ ರಚನೆಯ ವಿಚಾರ ಹೈಕೋರ್ಟ್‌ ವರೆಗೂ ತಲುಪಿತ್ತು. ಕಮಿಟಿ ರಚಿಸಿಲ್ಲ ಎಂದು ವಕೀಲ ರಮೇಶ್ ನಾಯಕ್ ಕೋರ್ಟ್ ಮೆಟ್ಟಿಲೇರಿದ್ದರು. ಕಮಿಟಿ ರಚಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಈಗ ವಾರ್ಡ್ ಕಮಿಟಿ ರಚನೆಗೆ ಬಜೆಟ್‌ನಲ್ಲಿ ₹ 10 ಲಕ್ಷ ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.