ADVERTISEMENT

ಪರಮಶಿವಯ್ಯ ದೂರದೃಷ್ಟಿ; ಬಯಲು ಸೀಮೆಗೆ ನೀರು

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 15:09 IST
Last Updated 12 ಫೆಬ್ರುವರಿ 2020, 15:09 IST
ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ‘ನೀರಾವರಿ ಯೋಜನೆಗಳ ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಯತಂತ್ರ’ ಕುರಿತು ಉಪನ್ಯಾಸ ನೀಡಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ‘ನೀರಾವರಿ ಯೋಜನೆಗಳ ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಯತಂತ್ರ’ ಕುರಿತು ಉಪನ್ಯಾಸ ನೀಡಿದರು.   

ತುಮಕೂರು: ಬಯಲು ಸೀಮೆಯ ಬರ ನೀಗಿಸಿದ ನೀರಾವರಿ ತಜ್ಞ ಪರಮಶಿವಯ್ಯ ಅವರದ್ದು ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ಸರಿಸಮಾನವಾದ ಸಾಧನೆ ಎಂದು ಸಂಸದ ಜಿ.ಎಸ್.ಬಸವರಾಜು ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದಿಂದ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಜಲಸಂಪನ್ಮೂಲ ಪ್ರಾಧಿಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕರ್ನಾಟಕದಲ್ಲಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದರೆ, ಪರಮಶಿವಯ್ಯ ಅವರು ಕರ್ನಾಟಕದ ನಿಜವಾದ ಜಲಸಂಪನ್ಮೂಲ ಪ್ರಾಧಿಕಾರವೇ ಆಗಿದ್ದರು. ಅವರ ಶ್ರಮ, ದೂರದೃಷ್ಟಿಯ ಕಲ್ಪನೆಯಿಂದ ಜಿಲ್ಲೆಯ ಜನರಿಗೆ ಹೇಮಾವತಿ ನೀರು ದೊರೆಯುತ್ತಿದೆ ಎಂದರು.

ADVERTISEMENT

ರೈತರ ಮೂಲ ಸಮಸ್ಯೆಗಳ ಅರಿವು ಪರಮಶಿವಯ್ಯ ಅವರಿಗಿತ್ತು. ಹೇಮಾವತಿಯನ್ನು ಬಯಲುಸೀಮೆಗೆ ಹರಿಸಲೇಬೇಕು ಎಂದು ಶಪಥ ಮಾಡಿ ಅದರಂತೆಯೇ ನಡೆದುಕೊಂಡರು. ಎತ್ತಿನಹೊಳೆ ಯೋಜನೆ ಅವರ ಕನಸಿನ ಕೂಸು. ಅವರ ಕೊಡುಗೆಯನ್ನು ಕರ್ನಾಟಕ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ‘ನೀರಾವರಿ ಯೋಜನೆಗಳ ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಯತಂತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿ, ನೀರಾವರಿ ನಾಲೆಗಳ ಆಧುನೀಕರಣದಿಂದ ನೀರಿನ ಪರಿಣಾಮಕಾರಿ ಬಳಕೆ ಸಾಧ್ಯ ಎಂದರು.

ಎತ್ತಿನಹೊಳೆ ಯೋಜನೆಯಿಂದ ಏಳು ಜಿಲ್ಲೆಗಳ 76 ಲಕ್ಷ ಮಂದಿಗೆ ಅನುಕೂಲ ಆಗುತ್ತದೆ. 24 ಟಿಎಂಸಿ ಅಡಿ ನೀರು ಬಯಲುಸೀಮೆಗೆ ಲಭ್ಯವಾಗುತ್ತದೆ. ಸುಮಾರು 527 ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ವಿವರಿಸಿದರು.

ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್, ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ರವೀಂದ್ರ ಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಎಂ.ಮುನಿರಾಜು, ಸಿಬಂತಿ ಪದ್ಮನಾಭ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.