ADVERTISEMENT

‘ಆದಿಜಾಂಬವ ಆಭಿವೃದ್ಧಿ ನಿಗಮದಿಂದ ಮಾದಿಗ ಸಮುದಾಯಕ್ಕೆ ಅನ್ಯಾಯ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 6:21 IST
Last Updated 21 ಸೆಪ್ಟೆಂಬರ್ 2024, 6:21 IST
ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ
ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ   

ಪಾವಗಡ: ‘ಆದಿಜಾಂಬವ ಆಭಿವೃದ್ಧಿ ನಿಗಮ ಅರಂಭವಾದಾಗಿನಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ’ ಎಂದು ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಪ್ರಕಟಣೆಯಲ್ಲಿ ಅರೋಪಿಸಿದ್ದಾರೆ.

ಅಭಿವೃದ್ಧಿ ನಿಗಮ ಆರಂಭವಾಗುವ ಮುನ್ನ ಡಾ ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಎಲ್ಲ ಪರಿಶೀಷ್ಟ ಜಾತಿ ಸಮುದಾಯದವರು ವಿವಿಧ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದರು. ಆಯಾಯಾ ತಾಲ್ಲೂಕುಗಳ ಜನಸಂಖ್ಯೆಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆಯಲ್ಲಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯಕ್ಕೆ ಹೆಚ್ಚು, ಕಡಿಮೆ ಜನಸಂಖ್ಯೆ ಇರುವ ಸಮುದಾಯಕ್ಕೆ ಕಡಿಮೆ ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ಮಾದಿಗ ಸಮುದಾಯದವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡದೆ ಸಾಕಷ್ಟು ಅನ್ಯಾಯ ಎಸಗಲಾಗುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಯಾವುದೇ ಯೋಜನೆಗಳ ಲಾಭ ಸಿಗುತ್ತಿಲ್ಲ. ಹೀಗಾಗಿ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿಯುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ, ಪಂಗಡದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಶೇ 24.1 ಅನುದಾನವನ್ನು ಆಯಾಯ ವರ್ಗದವರಿಗೆ ಮೀಸಲಿಡಬೇಕು ಎಂದು ಕಾಯ್ದೆ ತಂದರೂ, ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಆದಿಜಾಂಬವ ಅಭಿವೃದ್ಧಿ ನಿಗಮ ಆರಂಭವಾಗುವುದಕ್ಕೂ ಮುನ್ನ ಹಾಗೂ ನಂತರದ ಆರು ವರ್ಷಗಳ ತಾಲ್ಲೂಕಿನ ಅಂಕಿ ಅಂಶ ಗಮನಿಸಿದರೆ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿರುವ ಬಗ್ಗೆ ತಿಳಿದು ಬರುತ್ತದೆ ಎಂದು ದೂರಿದ್ದಾರೆ.

ADVERTISEMENT

ಎರಡು ಬಾರಿ ಶಾಸಕನಾಗಿದ್ದಾಗ ಯೋಜನೆಗಳ ಅನುಷ್ಠಾನದ ಮಾಹಿತಿ ಇದೆ. ಇದೀಗ ಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ಸಮುದಾಯ ಮತ್ತೆ ತುಳಿತಕ್ಕೆ ಒಳಗಾಗಲಿದೆ. ಆದಿಜಾಂಬವ ನಿಗಮ ಸಮುದಾಯದವರಿಗೆ ಮಾರಕವಾಗಲಿದೆ. ನೂರಾರು ಮಂದಿಗೆ ಅಂಬೇಡ್ಕರ ನಿಗಮದಿಂದ ಅನುಕೂಲವಾಗುತ್ತಿತ್ತು, ಆದಿ ಜಾಂಬವ ನಿಗಮ ಆರಂಭವಾದಾಗಿನಿಂದ ಕೇವಲ ಬೆರಳೆಣಿಕೆ ಫಲಾನುಭವಿಗಳು ಆಯ್ಕೆಯಾಗುತ್ತಿದ್ದಾರೆ. ಇದೊಂದು ವ್ಯವಸ್ಥಿತ ಹುನ್ನಾರ. ಸಮುದಾಯದವರು ಸರ್ಕಾರದ ಕಣ್ಣು ತೆರೆಸಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.