ADVERTISEMENT

ಪಾವಗಡ: ಸಾಲ ತೀರಿಸಲಾಗದೇ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:34 IST
Last Updated 26 ಫೆಬ್ರುವರಿ 2026, 5:34 IST
ಪಾವಗಡ ತಾಲ್ಲೂಕು ಬಿ.ಕೆ. ಹಳ್ಳಿ ಬಳಿ ಟವರ್‌ ಏರಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು 
ಪಾವಗಡ ತಾಲ್ಲೂಕು ಬಿ.ಕೆ. ಹಳ್ಳಿ ಬಳಿ ಟವರ್‌ ಏರಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು    

ಪಾವಗಡ: ಸಾಲದ ಸುಳಿಗೆ ಸಿಲುಕಿ ವಿದ್ಯುತ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ರಕ್ಷಣೆ ಮಾಡಿದ್ದಾರೆ. 

ಬಿ.ಕೆ. ಹಳ್ಳಿ ಗ್ರಾಮದ ಗೋಪಾಲ್‌ (53) ತಾಲ್ಲೂಕಿನ ನಾಗಲಮಡಿಕೆ ಹೋಬಳಿ ಬಿ.ಕೆ. ಹಳ್ಳಿ ಬಳಿ ಇರುವ ಸುಮಾರು 120 ಅಡಿ ಎತ್ತರದ 400 ಕಿಲೊ ವಾಟ್ ವಿದ್ಯುತ್ ಸರಬರಾಜು ಮಾಡುವ ಟವರ್ ಹತ್ತಿ ಕೂತಿದ್ದರು. ಮಂಗಳವಾರ ರಾತ್ರಿಯಿಂದ ಆಹಾರ ಸೇವಿಸದ ಕಾರಣ ಬಿಸಿಲಿನ ತಾಪಕ್ಕೆ ಟವರ್ ಮೇಲೆಯೇ ನಿತ್ರಾಣಗೊಂಡಿದ್ದರು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ತಿರುಮಣಿ ಪೊಲೀಸರು, ಸೋಲಾರ್ ಗ್ರಿಡ್ ಕಚೇರಿಗೆ ಕರೆ ಮಾಡಿ ವಿದ್ಯುತ್ ಸರಬರಾಜು ಕಡಿತಗೊಳಿಸಿದರು. 

ವಿದ್ಯುತ್ ಪೂರೈಕೆ ಟವರ್‌ನಿಂದ ಕೆಳಗಿಳಿಯುವಂತೆ ಗೋಪಾಲ್ ಅವರ ಮನವೊಲಿಕೆಗೆ ಯತ್ನಿಸಲಾಯಿತು. ಆದರೆ, ಗೋಪಾಲ್ ಅವರಿಗೆ ಇಳಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಲಾಯಿತು. ಅಗ್ನಿಶಾಮಕ ಸಿಬ್ಬಂದಿ 120 ಅಡಿ ಎತ್ತರದಲ್ಲಿ ಕುಳಿತ್ತಿದ್ದ ವ್ಯಕ್ತಿಯನ್ನು ಹಗ್ಗದ ಸಹಾಯದಿಂದ ಕೆಳಕ್ಕೆ ಇಳಿಸಿದರು. 

ADVERTISEMENT

ನನಗೆ ನನ್ನ ಕುಟುಂಬ ಸದಸ್ಯರಾದ ಮಗ ಮತ್ತು ಹೆಂಡತಿಯಿಂದ ಯಾವುದೇ ತೊಂದರೆಯಿಲ್ಲ. ಆದರೆ, ಸಾಲಗಾರರಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಅವರ ಕಿರುಕುಳದಿಂದ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಗೋಪಾಲ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೊಟ್ರೇಶ್‌, ವಿಜಯಕುಮಾರ್‌, ಸಿಬ್ಬಂದಿ ಪುಂಡಲೀಕ ಲಮಾಣಿ, ಎಎಸ್‌ಐ ಮಹಂತೇಶ್‌, ರೋಹಿತ್‌, ಸುನಿಲ್‌, ಅಗ್ನಿಶಾಮಕ ದಳದ ಠಾಣಾಧಿಕಾರಿ ಪ್ರವೀಣ್‌ ಕುಮಾರ್‌, ವೆಂಕಟೇಶ್‌ ನಾಡಗೌಡ, ಎಂ.ಎನ್‌. ನಾಗೇಶ, ಶೇಕ್‌ ಮನಸೂರ್‌ ಅಹಮದ್‌, ಎಚ್‌.ಎಸ್‌. ನಂದನ್‌, ಎನ್‌. ಎಂ. ಹರೀಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.