ADVERTISEMENT

ಪೇಜಾವರ ಶ್ರೀ ಸನಾತನ ಧರ್ಮದ ಕಳಶಪ್ರಾಯ

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 14:30 IST
Last Updated 11 ಜನವರಿ 2020, 14:30 IST
ತುಮಕೂರು ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಗರುನಮನ ಮತ್ತು ಮಹಾ ಸಮಾರಾಧನೆಯಲ್ಲಿ ಗಣ್ಯರು ಪೇಜಾವರ ಶ್ರೀಗಳಿಗೆ ಗುರುನಮನ ಸಲ್ಲಿಸಿದರು.
ತುಮಕೂರು ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಗರುನಮನ ಮತ್ತು ಮಹಾ ಸಮಾರಾಧನೆಯಲ್ಲಿ ಗಣ್ಯರು ಪೇಜಾವರ ಶ್ರೀಗಳಿಗೆ ಗುರುನಮನ ಸಲ್ಲಿಸಿದರು.   

ತುಮಕೂರು: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಅವರು ಮಾಡಿದ ಕಾರ್ಯಗಳು ನಮ್ಮ ಮುಂದಿವೆ ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜಿ ಅವರು ಅಭಿಪ್ರಾಯಪಟ್ಟರು.

ನಗರದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಮಾಧ್ವ ಮಂಡಲಿಯ ಜಿಲ್ಲಾ ಘಟಕ ಮತ್ತು ಕೃಷ್ಣಮಂದಿರದ ವತಿಯಿಂದ ಏರ್ಪಡಿಸಲಾಗಿದ್ದ ಗರುನಮನ ಮತ್ತು ಮಹಾಸಮಾರಾಧನೆಯಲ್ಲಿ ಅವರು ಮಾತನಾಡಿದರು.

ಪೇಜಾವರ ಶ್ರೀಗಳು ಜಾತಿ ಮತ ಪಂಥಗಳಿಂದ ಹೊರಬಂದು ಎಲ್ಲರೂ ತನ್ನವರೆಂದು ಅಪ್ಪಿಕೊಂಡ ಧೀರ ಸನ್ಯಾಸಿ. ಪಾವಗಡ ತಾಲ್ಲೂಕಿನಲ್ಲಿ ಕುಷ್ಠ, ಕ್ಷಯ ಮತ್ತು ನೇತ್ರ ಸೇವೆಗೆ ಪೇಜಾವರರ ಕೊಡುಗೆ, ಪ್ರೋತ್ಸಾಹ ಹಾಗೂ ಆಶೀರ್ವಾದ ಅಪಾರವಾದುದು. ಅವರು ತಮಗೆ ಒಬ್ಬ ಮಾರ್ಗದರ್ಶಕರಾಗಿದ್ದರು ಎಂದರು.

ADVERTISEMENT

ಉಡುಪಿಯಲ್ಲಿ ಕುಳಿತು ದೇಶದೆಲ್ಲೆಡೆ ಹಿಂದೂ ಧರ್ಮದ ಕಂಪನ ಎಬ್ಬಿಸಿದ್ದರು. ಅವರು ನೀಡುವ ಪ್ರತಿಯೊಂದೂ ಹೇಳಿಕೆಯೂ ಭಾರತದೆಲ್ಲೆಡೆ ದೊಡ್ಡ ಕಂಪನವನ್ನೇ ಎಬ್ಬಿಸುತ್ತಿತ್ತು. ಹಿಂದೂ ಧರ್ಮಕ್ಕೆ ಕಂಟಕವುಂಟಾದಾಗ ತಾನೊಬ್ಬ ಸನ್ಯಾಸಿ ಎಂದು ಮರೆತು ಸಿಡಿದೇಳುತ್ತಿದ್ದರು. ಸನಾತನ ಧರ್ಮಕ್ಕೆ ಕಳಶಪ್ರಾಯರಾಗಿದ್ದ ಪೇಜಾವರರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವುದೇ ನಾವು ಅವರಿಗೆ ಸಲ್ಲಿಸುವ ನಮನ ಎಂದರು.

ಪೇಜಾವರ ಶ್ರೀಗಳು ಧರ್ಮದ ಆಧಾರದಲ್ಲಿ ಭರತಖಂಡವನ್ನು ಜೋಡಿಸುವ ಆಶಯ ಹೊಂದಿದ್ದರು. ಅವರೊಬ್ಬ ಸಹೃದಯೀ, ಅಜಾತಶತ್ರು, ಹೃದಯವಂತ, ನವಭಾರತದ ನಿರ್ಮಾಣಕ್ಕಾಗಿ ಶ್ರಮಿಸಿದವರು. ಪ್ರತಿಯೊಬ್ಬರೂ ಪರಧರ್ಮ ಸಹಿಷ್ಣುತೆ ಬೆಳೆಸಿಕೊಂಡು ತನ್ನ ಧರ್ಮವನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಬಯಸಿದ್ದರು ಎಂದು ಹೇಳಿದರು.

ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ‘ಹಿಂದೂ ಧರ್ಮದಲ್ಲಿ ಅಸಮಾನತೆ ಹೋಗಲಾಡಿಸಬೇಕು. ದೇಶವನ್ನು ಸುಭದ್ರ ದೇಶವನ್ನಾಗಿ ಮಾಡಬೇಕು ಎಂದು ಪೇಜಾವರ ಶ್ರೀಗಳು ಬಯಸಿದ್ದರು’ ಎಂದರು.

ತುಮಕೂರು ಹಿರೇಮಠದ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪ್ರಮುಖರಾದ ಎಂ.ಕೆ.ನಾಗರಾಜರಾವ್, ಬೇಲೂರು ಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್ ನುಡಿನಮನ ಸಲ್ಲಿಸಿದರು. ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಪ್ರಾಂತ ಕಾರ್ಯದರ್ಶಿ ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟಕ ಜಿ.ಕೆ.ಶ್ರೀನಿವಾಸ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.