ಎಲ್ಲೆಡೆ ಚಿರತೆ ಉಪಟಳ ಹೆಚ್ಚಾಗಿದ್ದು ಜನರು ಹೈರಾಣಾಗಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆಂಬ ಚಿಂತೆ ಕಾಡುತ್ತಿರುವ ಹೊತ್ತಿನಲ್ಲೇ ನಗರ ಪ್ರದೇಶಕ್ಕೂ ಕಾಲಿಟ್ಟಿವೆ. ಇದರಿಂದ ಏನೆಲ್ಲ ಸಮಸ್ಯೆ ಆಗುತ್ತಿದೆ, ಅದಕ್ಕೆ ಪರಿಹಾರ ಇಲ್ಲವೆ? ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪ್ರಾಣಿ–ಮಾನವ ಸಂಘರ್ಷದ ಮೇಲೆ ಬೆಳಕು ಚೆಲ್ಲುವ ಫೋಕಸ್...
ತುಮಕೂರು: ಈಗ ಜಿಲ್ಲೆಯ ಯಾವ ಭಾಗಕ್ಕೆ ಕಾಲಿಟ್ಟರೂ ಪ್ರಮುಖವಾಗಿ ಕೇಳಿ ಬರುವುದು ‘ಚಿರತೆ ಹಿಡಿದು ದೂರ ಸಾಗಿಸಿ’ ಎಂಬ ಬೇಡಿಕೆ. ಗ್ರಾಮೀಣ ಜನರನ್ನು ಕಾಡುತ್ತಿದ್ದ ಈ ಸಮಸ್ಯೆ ಈಗ ನಗರ ಪ್ರದೇಶಕ್ಕೂ ತಟ್ಟಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈಚೆಗೆ ಸಿದ್ಧಗಂಗಾ ಮಠದ ಆವರಣಕ್ಕೆ ಬಂದಿತ್ತು. ನಗರದ ಸಪ್ತಗಿರಿ ಬಡಾವಣೆಯಲ್ಲಿ ಸುತ್ತಾಡಿದ್ದ ಚಿರತೆ ಜನರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯ ನೋಡಿದವರು ಹೌಹಾರಿದ್ದರು. ಹಳ್ಳಿ– ನಗರ ಎನ್ನದೆ ಆಹಾರ ಹರಸಿ ಬರುತ್ತಿವೆ. ಈಗ ಚಿರತೆ ಕಾಟ ಎಲ್ಲಿಲ್ಲ ಎನ್ನುವಂತಾಗಿದೆ.
ಅರಣ್ಯ ಪ್ರದೇಶದ ಅತಿಕ್ರಮಣ, ಮಾನವನ ಹಸ್ತಕ್ಷೇಪ ಹೆಚ್ಚಾದಂತೆ, ಬಲಿ ಪ್ರಾಣಿಗಳ ಕೊರತೆಯಾದಂತೆ ಆಹಾರ ಹುಡುಕಿಕೊಂಡು ನಾಡಿಗೆ ಬರುತ್ತಿವೆ. ಪ್ರತಿ ವರ್ಷವೂ ನೂರಾರು ಜಾನುವಾರುಗಳು ಬಲಿಯಾಗುತ್ತಿವೆ. ಇದರಿಂದ ರೋಸಿಹೋದ ಜನರು ರೊಚ್ಚಿಗೆದ್ದಿದ್ದಾರೆ. ಮಾನವ– ಚಿರತೆ ಸಂಘರ್ಷ ಮಿತಿಮೀರುವ ಹಂತಕ್ಕೆ ಹೋಗುತ್ತಿದೆ. ದಾಳಿ ಹೆಚ್ಚಿದಂತೆ ಜನರಿಂದ ಪ್ರತಿರೋಧ ಎದುರಿಸುವುದರ ಜತೆಗೆ ಅವುಗಳನ್ನು ಸೆರೆ ಹಿಡಿಯುವುದು, ನಿಯಂತ್ರಿಸುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿದೆ. ಒಂದು ಕಡೆ ಸೆರೆ ಹಿಡಿದರೆ, ಮತ್ತೊಂದೆಡೆ ಸಮಸ್ಯೆ ಎದುರಾಗಿರುತ್ತದೆ. ಎಲ್ಲೆಡೆ ಸ್ಪಂದಿಸುವುದು ಸಿಬ್ಬಂದಿಗೆ ಕಷ್ಟಕರವಾಗಿದೆ.
ಬೋನು ಕೊರತೆ: ಜಿಲ್ಲೆಯಲ್ಲಿ ಚಿರತೆ ಸೆರೆ ಹಿಡಿಯುವ ಸಲುವಾಗಿ ಸುಮಾರು 50ಕ್ಕೂ ಹೆಚ್ಚು ಬೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಉಪಟಳ ಹೆಚ್ಚಾದ ಭಾಗಕ್ಕೆ ಬೋನ್ ಸಾಗಿಸುವುದೇ ದೊಡ್ಡ ಕೆಲಸವಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಸಾಲದಾಗುತ್ತವೆ. ಚಿರತೆ ಕಾಣಿಸಿಕೊಂಡ ಕಡೆಗಳಲ್ಲಿ ಸೆರೆಗೆ ಒತ್ತಾಯ ಕೇಳಿ ಬರುತ್ತದೆ. ಅಂತಹ ಕಡೆಗಳಲ್ಲಿ ಬೋನ್‌ಗಳನ್ನು ಇಡಲು ಸಾಧ್ಯವೇ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಚೆಗೆ ತಿಪಟೂರು ತಾಲ್ಲೂಕಿನಲ್ಲೂ ಅಂತಹುದೇ ಪರಿಸ್ಥಿತಿಯನ್ನು ಅರಣ್ಯ ಅಧಿಕಾರಿಗಳು ಎದುರಿಸಬೇಕಾಯಿತು. ಅಕ್ಕಪಕ್ಕದ ತಾಲ್ಲೂಕಿನಲ್ಲೂ ಬೇಡಿಕೆ ಹೆಚ್ಚಿದ್ದರಿಂದ ಅಲ್ಲಿಂದಲೂ ತರಿಸಲು ಸಾಧ್ಯವಾಗಲಿಲ್ಲ. ದೂರದ ಪ್ರದೇಶಗಳಿಂದ ತರಿಸಲಾಗದೆ ಪರದಾಡಿದರು. ಎಲ್ಲಿ ಅಂಥ ಬೋನ್ ಇಡುವುದು ಎಂಬುದು ಅರಣ್ಯ ಇಲಾಖೆ ಸಿಬ್ಬಂದಿಯ ದೊಡ್ಡ ಪ್ರಶ್ನೆ.
ಚಿರತೆ ಸೆರೆ: ವರ್ಷದಿಂದ ವರ್ಷಕ್ಕೆ ಸೆರೆ ಹಿಡಿಯುವ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದೆ. ಈ ವರ್ಷ ಈವರೆಗೆ 14 ಚಿರತೆ ಸೆರೆ ಹಿಡಿಯಲಾಗಿದೆ. 2023ರಲ್ಲಿ 18, 2022ರಲ್ಲಿ 12 ಚಿರತೆಗಳು ಬೋನಿಗೆ ಬಿದ್ದಿವೆ. ಕಳೆದ ಐದು ವರ್ಷಗಳಲ್ಲಿ 70ಕ್ಕೂ ಹೆಚ್ಚು ಸೆರೆಯಾಗಿವೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ. ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರೆ, ಮತ್ತೆ ನಾಡಿಗೆ ಬರುತ್ತಿವೆ. ಈ ಸಮಸ್ಯೆ ಪರಿಹಾರಕ್ಕೆ ಯಾರ ಬಳಿಯೂ ಉತ್ತರವಿಲ್ಲ.
ಹೆಚ್ಚಿದ ಸಂತತಿ: ಚಿರತೆಗಳ ಸಂತತಿ ಹೆಚ್ಚುತ್ತಲೇ ಸಾಗಿದೆ. ಹಿಂದಿನ ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದರೆ, ಈಗ ಪ್ರತಿ ದಿನವೂ ಸಮಸ್ಯೆ ತಂದೊಡ್ಡಿವೆ. ಕಾಡಿನಲ್ಲಿ ಬಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಾದಂತೆ ನಾಡಿಗೆ ನುಗ್ಗಿ ನಾಯಿ, ಹಂದಿ, ಕುರಿ, ಮೇಕೆ, ಹಸು ಸೇರಿದಂತೆ ಸಿಕ್ಕ ಪ್ರಾಣಿಗಳನ್ನು ಬಲಿ ಪಡೆಯುತ್ತಿವೆ. ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ. ನಗರದ ಸುತ್ತಮುತ್ತಲಿನ ಪ್ರದೇಶ, ರಸ್ತೆ, ಖಾಲಿ ಜಾಗದಲ್ಲಿ ಕೋಳಿ ಮಾಂಸದ ತ್ಯಾಜ್ಯ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿದೆ. ಅಂತಹ ಕಡೆಗಳಿಗೆ ಆಹಾರಕ್ಕಾಗಿ ಬರುತ್ತಿವೆ. ಮಾಂಸದ ತ್ಯಾಜ್ಯ ಚಿರತೆಯನ್ನು ಸೆಳೆಯುತ್ತಿದೆ. ಜನರಲ್ಲಿ ಜಾಗೃತಿ ಮೂಡದಿದ್ದರೆ ನಗರ ಪ್ರದೇಶಕ್ಕೆ ಬರುವುದನ್ನು ತಡೆಯುವುದು ಕಷ್ಟಕರ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಗಣಿಗಾರಿಕೆ: ಕಲ್ಲು ಗಣಿಗಾರಿಕೆಗಳು ಚಿರತೆಗಳ ಆವಾಸ ಸ್ಥಾನವನ್ನು ನುಂಗಿ ಹಾಕಿವೆ. ಡೈನಮೈಟ್ ಇಟ್ಟು ಬಂಡೆ ಸ್ಫೋಟಿಸುವುದು, ಯಂತ್ರಗಳ ಶಬ್ದ, ಕಾರ್ಮಿಕರ ಚಲನವಲನದಿಂದ ಬೆದರಿ ತಮ್ಮ ನೆಲೆಯನ್ನು ಕಳೆದುಕೊಂಡು ದಿಕ್ಕೆಟ್ಟಿವೆ. ಎಲ್ಲಿ ಜೀವಿಸಬೇಕು ಎಂಬುದು ತೋಚದೆ ಸಿಕ್ಕ ಕಡೆಗಳಿಗೆ ನುಗ್ಗುತ್ತಿರುವುದು ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುವಂತೆ ಮಾಡಿದೆ.
ಹಿಡಿದ ಚಿರತೆ ಎಲ್ಲೆಗೆ ಬಿಡುತ್ತಾರೆ?
ಪ್ರಮುಖವಾಗಿ ಸಮಸ್ಯೆ ಇರುವುದು ಸೆರೆ ಹಿಡಿದ ಚಿರತೆಗಳನ್ನು ಎಲ್ಲಿಗೆ ಬಿಡುವುದು ಎಂಬ ಬಗ್ಗೆ. ಜಿಲ್ಲೆಯಲ್ಲಿ ವಿಸ್ತಾರವಾದ ದೊಡ್ಡ ಮಟ್ಟದ ಅರಣ್ಯ ಪ್ರದೇಶಗಳಿಲ್ಲ. ಹೆಚ್ಚೆಂದರೆ ಕೆಲವೇ ಚದರ ಕಿ.ಮೀ ಸುತ್ತಳತೆ ಹೊಂದಿರುವ ಪುಟ್ಟ–ಪುಟ್ಟ ಅರಣ್ಯವಿದೆ. ಉಳಿದಂತೆ ಕುರುಚಲು ಕಾಡು ಬೆಟ್ಟ ಪ್ರದೇಶ. ಸೆರೆ ಹಿಡಿದ ಚಿರತೆಗಳನ್ನು ದೂರದ ಪ್ರದೇಶಕ್ಕೆ ಸಾಗಿಸುವುದಿಲ್ಲ. ಸುತ್ತಮುತ್ತಲಿನ ಬೆಟ್ಟ ಪ್ರದೇಶ ಸಮೀಪದ ಅರಣ್ಯ ಹೆಚ್ಚೆಂದರೆ 20ರಿಂದ 30 ಕಿ.ಮೀ ವ್ಯಾಪ್ತಿಯಲ್ಲಿ ಬಿಡಲಾಗುತ್ತದೆ. ಆಹಾರದ ರುಚಿ ಕಂಡ ಚಿರತೆಗಳು ಒಂದೆರಡು ವಾರಗಳಲ್ಲಿ ಮತ್ತೆ ಅದೇ ಸ್ಥಳಕ್ಕೆ ಬಂದು ಕಾಣಿಸಿಕೊಳ್ಳುತ್ತವೆ. ಒಂದು ಚಿರತೆ ಹೋಯಿತು ಮತ್ತೊಂದು ಬಂದಿದೆ ಎಂದೇ ಆ ಭಾಗದ ಜನರು ಭಾವಿಸುತ್ತಾರೆ. ಇರುವ ಚಿರತೆಗಳೇ ಒಂದು ಕಡೆಯಿಂದ ಮತ್ತೊಂದೆಡೆ ಸುತ್ತುತ್ತಿರುತ್ತವೆ. ಚಿರತೆ ಸಂತತಿಯೂ ಹೆಚ್ಚಾಗುತ್ತಿದ್ದು ಒಂದು ಹೋದರೆ ಮತ್ತೊಂದು ಎಂಬಂತಾಗಿದೆ. ಈ ಭಾಗದ ಹವಾಮಾನ ಆಹಾರ ಲಭ್ಯತೆ ಸೇರಿದಂತೆ ಹಲವು ಕಾರಣಗಳಿಂದ ವಂಶಾಭಿವೃದ್ಧಿಯೂ ಹೆಚ್ಚುತ್ತಿರುವುದು ಚಿರತೆ ನಿಯಂತ್ರಣವನ್ನು ಕಷ್ಟಸಾಧ್ಯವಾಗಿಸಿದೆ.
ದೂರ ಸಾಗಿಸಿ
ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಅರಣ್ಯ ಪ್ರದೇಶ ಇಲ್ಲದಿರುವುದರಿಂದ ಸೆರೆ ಹಿಡಿದ ಎಲ್ಲಾ ಚಿರತೆಗಳನ್ನು ಅಲ್ಲದಿದ್ದರೂ ಉಪಟಳ ನೀಡುವ ಮನುಷ್ಯರ ರಕ್ತದ ರುಚಿ ನೋಡಿದ ಚಿರತೆಗಳನ್ನಾದರೂ ದೂರ ಸಾಗಿಸಬೇಕು. ಬಂಡೀಪುರ ನಾಗರಹೊಳೆ ಮಲೆಮಹದೇಶ್ವರ ಬೆಟ್ಟ ಶಿವಮೊಗ್ಗ ಚಿಕ್ಕಮಗಳೂರು ಭಾಗದ ಅರಣ್ಯ ಪ್ರದೇಶಕ್ಕಾದರೂ ಬಿಡಬೇಕು. ಆಗ ಸ್ವಲ್ಪ ಮಟ್ಟಿಗೆ ಮಾನವ– ಪ್ರಾಣಿ ಸಂಘರ್ಷ ತಗ್ಗಿಸಬಹುದು ಎಂಬುದು ಹಲವರ ಬೇಡಿಕೆಯಾಗಿದೆ.
ಸೆರೆಗೆ ಕ್ರಮ
ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಿರತೆ ಸಂತತಿ ಹೆಚ್ಚಾಗುತ್ತಿದೆ. ಆಹಾರ ಹಾಗೂ ಇಲ್ಲಿನ ವಾತಾವರಣ ಸಂತತಿ ಹೆಚ್ಚಾಗುವಂತೆ ಮಾಡಿದೆ. ಚಿರತೆ ಕಾಣಿಸಿಕೊಂಡ ಸ್ಥಳಗಳಲ್ಲಿ ಬೋನಿಟ್ಟು ಸೆರೆ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಸಾಗಿಸಲಾಗುತ್ತದೆ. ನಿಯಂತ್ರಣ ಕಷ್ಟಕರವಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮಾ ಹೇಳುತ್ತಾರೆ. ಬೋನ್‌ಗಳ ಕೊರತೆ ಇಲ್ಲ. ಆದರೆ ಬೇಡಿಕೆ ಹೆಚ್ಚುತ್ತಿದೆ. ಅಗತ್ಯ ಇಡುವೆಡೆಗೆ ಅಕ್ಕಪಕ್ಕದ ತಾಲ್ಲೂಕಿನಿಂದ ನೀಡಲಾಗುತ್ತಿದೆ. ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.