ADVERTISEMENT

ಒಬ್ಬ ಆರೋಪಿ ಬಂಧನ; ದುಷ್ಕೃತ್ಯಕ್ಕೆ ಸಂಚು

ಅನುಮಾನಾಸ್ಪದ ವಾಹನಕ್ಕೆ ತಡೆ; ಜಯನಗರ ಪಿಎಸ್‌ಐ ನವೀನ್‌ಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 12:33 IST
Last Updated 5 ಫೆಬ್ರುವರಿ 2019, 12:33 IST
ಡಾ.ಕೆ.ವಂಶಿಕೃಷ್ಣ
ಡಾ.ಕೆ.ವಂಶಿಕೃಷ್ಣ   

ತುಮಕೂರು: ಇಲ್ಲಿನ ಜಯನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್ ನವೀನ್ ಅವರು ಸೋಮವಾರ ನಡುರಾತ್ರಿ ಉಪ್ಪಾರಹಳ್ಳಿ ಕೆಳ ಸೇತುವೆ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಇನೋವಾ ಕ್ರಿಸ್ಟಾ ವಾಹನ ತಡೆಯಲು ಮುಂದಾದಾಗ ನೆಲಕ್ಕೆ ಬಿದ್ದು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಿತೇಶ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಪಿಎಸ್‌ಐ ನವೀನ್ ಗಸ್ತು ಕರ್ತವ್ಯದಲ್ಲಿ ಇದ್ದಾಗ ಅನುಮಾನಾಸ್ಪದವಾಗಿ ಬಂದ ಕಾರನ್ನು ತಡೆದಿದ್ದಾರೆ. ಅದರಲ್ಲಿದ್ದ 25 ರಿಂದ 35 ವರ್ಷದೊಳಗಿನ ಆರು ಯುವಕರು ಪಾನಮತ್ತರಾಗಿದ್ದರು. ಕಾರಿನಲ್ಲಿ ದೊಣ್ಣೆ ಹಾಗೂ ಹರಿತವಾದ ಆಯುಧಗಳು ಕಂಡು ಬಂದಿದೆ. ತಪಾಸಣೆಗಾಗಿ ಕಾರಿನ ಸ್ಟೇರಿಂಗ್ ಹಿಡಿದು ಪಿಎಸ್‌ಐ ನಿಲ್ಲಿಸಲು ಮುಂದಾಗಿದ್ದಾರೆ. ಆಗ ಚಾಲಕ ಏಕಾಏಕಿ ಕಾರನ್ನು ಜೋರಾಗಿ ಚಲಾಯಿಸಿ ಪರಾರಿಯಾಗಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ.

‘ಕಾರನ್ನು ಚಲಾಯಿಸಿದಾಗ ನವೀನ್ ನೆಲಕ್ಕೆ ಬಿದ್ದಿದ್ದಾರೆ. ಅವರ ತುಟಿ, ಮೂಗು, ಮೊಣ ಕೈ ಹಾಗೂ ಮಂಡಿಚಿಪ್ಪಿಗೆ ಪೆಟ್ಟು ಬಿದ್ದಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುವುದು’ ಎಂದರು.

ADVERTISEMENT

‘ಈ ಆರೋಪಿಗಳೆಲ್ಲರೂ ಬೆಂಗಳೂರಿನವರು. ಮೇಲ್ನೋಟಕ್ಕೆ ಇಲ್ಲಿ ತೀವ್ರವಾದ ದುಷ್ಕೃತ್ಯ ಎಸಗಲು ಬಂದಿದ್ದರು ಎನ್ನುವುದು ತಿಳಿಯುತ್ತದೆ. ಮೈಸೂರಿನಲ್ಲಿ ಪಿಎಸ್‌ಐಗೆ ವಾಹನ ಗುದ್ದಿಸಿರುವ ಪ್ರಕರಣಕ್ಕೂ ಇದಕ್ಕೂ ಸಂಬಂಧವಿದೆಯೇ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಲು ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

‘ನಗರದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವುದಕ್ಕೆ ಖುದ್ದು ಗಸ್ತು ಕಾರ್ಯನಿರ್ವಹಿಸುವಂತೆ ಎಲ್ಲ ಪಿಎಸ್‌ಐಗಳಿಗೆ ಸೂಚಿಸಲಾಗಿದೆ. ಆ ಭಾಗವಾಗಿ ನವೀನ್ ಕರ್ತವ್ಯ ನಿರ್ವಹಿಸುತ್ತಿದ್ದರು’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ರೌಡಿಗಳನ್ನು ಮಟ್ಟಹಾಕಲು ಹಾಗೂ ವಿವಿಧ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ರೌಡಿ ನಿಗ್ರಹ ದಳವನ್ನೂ ರೂಪಿಸಲಾಗುವುದು’ ಎಂದರು.

‘ಗಣ್ಯರು, ಸಾಮಾನ್ಯ ಜನರೆಲ್ಲರೂ ಕಾನೂನಿನ ದೃಷ್ಟಿಯಲ್ಲಿ ಒಂದೇ. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಾರ್ವಜನಿಕರು ನಿಗದಿತ ಆಟೊ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಬೇಕು. ಆಟೊ ಚಾಲಕರು ಬಾಡಿಗೆ ಕಾರಣಕ್ಕೆ ಮನಸ್ಸಿಗೆ ಬಂದ ರೀತಿಯಲ್ಲಿ ಹಣವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.