ADVERTISEMENT

ಪೊಲೀಸ್‌ ರಕ್ಷಣೆಯಲ್ಲಿ ಜೂಜು; ಹರಿದಾಡುತ್ತಿದೆ ಆಡಿಯೊ

ಪಾವಗಡ: ಸಾಮಾಜಿಕ ಜಾಲತಾಣಗಳಲ್ಲಿ ಯುವ ಜನರಿಂದ ವ್ಯಾಪಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 11:37 IST
Last Updated 29 ಏಪ್ರಿಲ್ 2019, 11:37 IST
ಜೂಜಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಬರಹ (ಎಡಚಿತ್ರ). ಯುವಜನರು ಪ್ರತಿಕ್ರಿಯಿಸಿರುವುದು
ಜೂಜಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಬರಹ (ಎಡಚಿತ್ರ). ಯುವಜನರು ಪ್ರತಿಕ್ರಿಯಿಸಿರುವುದು   

ಪಾವಗಡ: ತಾಲ್ಲೂಕಿನ ಅರಸೀಕೆರೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಒಬ್ಬರು ಇಸ್ಪೀಟ್ ಜೂಜು ನಿಲ್ಲಿಸುವಂತೆ ಜೂಜು ಆಡಿಸುವವರ ಬಳಿ ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಅರಸೀಕೆರೆ ಠಾಣೆಯ ಕಾನ್‌ಸ್ಟೆಬಲ್ ಉಮೇಶ್ ಎಂಬುವವರು ಅವರ ಸಂಬಂಧಿ ಸ್ವಾಮಿ ಎಂಬುವವರಿಗೆ ಕೆಲವು ತಿಂಗಳಿಂದ ಇಸ್ಪೀಟ್ ಆಡಿಸಲು ಸಹಕಾರ ನೀಡಿರುವ ಬಗ್ಗೆ ಆಡಿಯೊದಲ್ಲಿ ಪ್ರಸ್ತಾಪವಾಗಿದೆ. ‘ಪೊಲೀಸರೇ ಮಟ್ಕಾ, ಇಸ್ಪೀಟ್ ಆಡಿಸುತ್ತಿದ್ದಾರೆ’ ಎಂದು
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ.

‘ಸ್ವಾಮಿ ಅವರೇ, ಶೈಲಾಪುರ, ಕೆ.ಟಿ.ಹಳ್ಳಿ, ಬೆಳ್ಳಿಬಟ್ಟಲು, ದೇವಲಕೆರೆಯಲ್ಲಿ ಒಂದೂವರೆ ತಿಂಗಳಿಂದ ಇಸ್ಪೀಟ್ ಆಡಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನೀವು ಏನು ಮಾಡುತ್ತೀದ್ದೀರಿ? ಎಂದು ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ನೀವು ಸಾಹೇಬರ ಹತ್ತಿರ ಬಂದು ಇಸ್ಪೀಟ್ ನಿಲ್ಲಿಸುವುದಾಗಿ ಹೇಳಿ. ಉಮೇಶಪ್ಪ ನಿಮ್ಮ ಸಂಬಂಧಿ. ಅವರು ನಿಮಗೆ ಆಟ ಆಡಿಸಲು ಅನುಮತಿ ಕೊಡಿಸಿದ್ದಾರೆ ಎನ್ನುವುದು ಗೊತ್ತು. ಉಮೇಶಪ್ಪ ಅವರಿಗೆ ತೊಂದರೆ ಆಗಬಾರದು ಎಂದು ಸುಮ್ಮನೆ ಇದ್ದೀನಿ. ಆಟ ನಿಲ್ಲಿಸದಿದ್ದರೆ ದಾಳಿ ಮಾಡಿಸುವುದು ನನಗೆ ಗೊತ್ತಿದೆ’ ಎಂದು ಕಾನ್‌ಸ್ಟೆಬಲ್ ಹೇಳಿದ್ದಾರೆ.

ADVERTISEMENT

ಇದಕ್ಕೆ ಸ್ವಾಮಿ ‘ನಿಮಗೆ ಗೊತ್ತಿಲ್ವ ಸರ್. ಪೊಲೀಸ್ ಅನುಮತಿ ಇಲ್ಲದೆ ನಾನು ಏನು ಮಾಡುವುದಕ್ಕೂ ಆಗುವುದಿಲ್ಲ. ಬೇರೆ ಕಡೆ ಆಡಿಸ್ತೀನಿ ಬಿಡಿ. ಜಾಗ ಬದಲಾವಣೆ ಮಾಡುತ್ತೇನೆ. ನಾಳೆ ಠಾಣೆ ಹತ್ತಿರ ಬಂದು ಮಾತನಾಡುತ್ತೇನೆ’ ಎಂದಿದ್ದಾರೆ.

‘ನನಗೇನೂ ಬೇಕಿಲ್ಲ. ನಾಳೆ ಸಾಹೇಬರ ಬಳಿ ಬಂದು ಮಾತನಾಡಿ. ಆಟ ನಿಲ್ಲಿಸು’ ಎಂದು ಹೇಳಿ ಕಾನ್‌ಸ್ಟೆಬಲ್ ಕರೆ ಸ್ಥಗಿತಗೊಳಿಸಿದ್ದಾರೆ.

‘ಪೊಲೀಸರೆ ಜೂಜಿಗೆ ಅನುಮತಿ ನೀಡುತ್ತಾರೆ. ಜೂಜುಕೋರರಿಗೆ ರಕ್ಷಣೆ ನೀಡುವ ಪೊಲೀಸರು, ರಾಜಕಾರಣಿಗಳಿಗೆ ಯಾವ ಭಾಷೆ ಬಳಸಬೇಕು’ ಎಂದು ರಮೇಶ್ ಎಂಬುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರಹ ಪ್ರಕಟಿಸಿದ್ದಾರೆ.

ಮಂಜುನಾಥ ಗೌಡ ಎಂಬುವವರು, ‘ಮಂಗಳವಾಡದಲ್ಲಿ ₹ 500 ಪಡೆದು ಒಂದು ರಾತ್ರಿ ಆಟ ಆಡಲು ಅನುಮತಿ ಕೊಡುತ್ತಾರೆ’ ಎಂದು ಟೀಕಿಸಿದ್ದಾರೆ.

ಮೊನ್ನೆ ಕೆ.ಟಿ. ಹಳ್ಳಿಯಲ್ಲಿ ನಾಟಕ ಇತ್ತು. ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದಾಗ ಸುಮಾರು ₹ 3 ರಿಂದ 4 ಲಕ್ಷ ಹಣ ಸಿಕ್ಕಿದೆ ಎಂದು ರಾಜೇಶ್ ಎಂಬುವರು ಪ್ರಶ್ನಿಸಿದ್ದಾರೆ.

ತಾಲ್ಲೂಕಿನಾದ್ಯಂತ ಮಟ್ಕಾ, ಇಸ್ಪೀಟ್ ಎಗ್ಗಿಲ್ಲದೆ ನಡೆಯುತ್ತಿದೆ. ಇವುಗಳನ್ನು ತಡೆಯುವಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಹಿಂದೆ ಹೋರಾಟ ಸಹ ನಡೆಸಿದ್ದರು. ಪೊಲೀಸರೇ ಇಲ್ಲಿ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ಆರೋಪಗಳು ಈ ಹಿಂದಿನಿಂದಲೂ ವ್ಯಾಪಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.