ADVERTISEMENT

ಕರ್ತವ್ಯ ಲೋಪ; ಇನ್‌ಸ್ಪೆಕ್ಟರ್ ರಾಘವೇಂದ್ರ ಅಮಾನತು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:30 IST
Last Updated 14 ಫೆಬ್ರುವರಿ 2020, 9:30 IST

ಪಾವಗಡ: ಕರ್ತವ್ಯ ಲೋಪದ ಆರೋಪದ ಮೇಲೆ ಪಟ್ಟಣ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ರಾಘವೇಂದ್ರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅಮಾನತು ಮಾಡಿದ್ದಾರೆ.

ಶಂಕರನಾಯ್ಕ ಎಂಬುವವರ ಎಟಿಎಂ ಕಾರ್ಡ್ ಪಡೆದು ವ್ಯಕ್ತಿಯೊಬ್ಬ ಠಾಣೆ ಮುಂಭಾಗದ ಕರ್ನಾಟಕ ಬ್ಯಾಂಕ್ ಎಟಿಎಂನಿಂದ ₹ 1 ಲಕ್ಷ ಡ್ರಾ ಮಾಡಿಕೊಂಡಿದ್ದ. ಮತ್ತೊಬ್ಬ ವ್ಯಕ್ತಿ ರಾಜವಂತಿ ಅಡವಪ್ಪ ಎಂಬುವವರ ಎಟಿಎಂ ಕಾರ್ಡ್ ಪಡೆದು ₹ 25 ಸಾವಿರ ಡ್ರಾ ಮಾಡಿದ್ದ. ಈ ಇಬ್ಬರು ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಪಟ್ಟಣದ ಶನೈಶ್ಚರ ದೇಗುಲದಲ್ಲಿ ಭಕ್ತರೊಬ್ಬರ ₹ 80 ಸಾವಿರ ಕಳ್ಳತನವಾಗಿತ್ತು. ಈ ಪ್ರಕರಣವನ್ನೂ ದಾಖಲಿಸಿರಲಿಲ್ಲ.

ಆಂಧ್ರಪ್ರದೇಶದ ಮಡಕಶಿರಾ ಪೊಲೀಸರು ಕಳ್ಳನೊಬ್ಬನನ್ನು ಬಂಧಿಸಿದ್ದು ಆತ ಪಾವಗಡದಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ನೀಡಿದ್ದ. ಈ ಎಲ್ಲ ಪ್ರಕರಣಗಳ ಬಗ್ಗೆ ಗುಪ್ತಚರ ವಿಭಾಗದಿಂದ ವರದಿ ಪಡೆದು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಅಮಾನತು ವಿಚಾರ ತಿಳಿದ ಕೂಡಲೇ ಸಾರ್ವಜನಿಕರು ಶನೈಶ್ಚರ ದೇಗುಲದಲ್ಲಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ರಾಘವೇಂದ್ರ 2018ರಲ್ಲಿ ತುಮಕೂರಿನ ಹೊಸಬಡಾವಣೆ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಕರ್ತವ್ಯ ಲೋಪ ಆರೋಪದಲ್ಲಿ ಅವರನ್ನು ಅಂದಿನ ಎಸ್‌ಪಿ ದಿವ್ಯಾಗೋಪಿನಾಥ್ ಅಮಾನತುಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.