ADVERTISEMENT

ಚೇಳೂರು: ಕಳಪೆ ಕಾಮಗಾರಿ; ಗ್ರಾಮಸ್ಥರ ಆಕ್ರೋಶ

ಪ್ರತಿಭಟನೆಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 7:40 IST
Last Updated 9 ಅಕ್ಟೋಬರ್ 2021, 7:40 IST
ಚೇಳೂರಿನ ಉರ್ದು ಶಾಲೆಯಲ್ಲಿ ನಡೆಯುತ್ತಿರುವ ಉರ್ದು ಶಾಲೆಯಲ್ಲಿನ ಶೌಚಾಲಯ
ಚೇಳೂರಿನ ಉರ್ದು ಶಾಲೆಯಲ್ಲಿ ನಡೆಯುತ್ತಿರುವ ಉರ್ದು ಶಾಲೆಯಲ್ಲಿನ ಶೌಚಾಲಯ   

ಚೇಳೂರು: ಹೋಬಳಿಯಲ್ಲಿ ಕಳಪೆ ಕಾಮಗಾರಿಗಳು ಹೆಚ್ಚುತ್ತಿದ್ದು, ಇದರಿಂದ ಸರ್ಕಾರದ ಹಣ ದುರುಪಯೋಗವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಉರ್ದು ಶಾಲೆಯಲ್ಲಿ ನಡೆಯುತ್ತಿರುವ ₹1.90 ಲಕ್ಷದ ಕಾಮಗಾರಿ ಕಳಪೆಯಿಂದ ಕೂಡಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ.ಸ್ಥಳಕ್ಕೆ ಸಿಆರ್‌ಪಿ ಅಧಿಕಾರಿಗಳಾದ ಭೀಮಣ್ಣ, ಮಹಮದ್ ಯೂಸೆಫ್ ಭೇಟಿ ನೀಡಿ ಕಾಮಗಾರಿ ಕಳಪೆಯಾಗಿದ್ದರೂ, ಸಮಾಧಾನಕರವಾಗಿದೆ ಎಂಬ ಹೇಳಿಕೆ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಕಾರ್ತಿಕೇಯನ್ದೂರಿದ್ದಾರೆ.

ಎಂಜಿನಿಯರ್ ಗೋಪಿನಾಥ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಸೂಕ್ತ ಸಾಮಗ್ರಿಗಳನ್ನು ಬಳಸಲು ತಿಳಿಸಿದರೂ, ಕ್ರಮ ಕೈಗೊಳ್ಳದ ಗುತ್ತಿಗೆದಾರರ ವಿರುದ್ಧ ಶಾಲಾ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದೇ ಗ್ರಾಮದ ಮಲ್ಲಿಕಾರ್ಜುನ ಪ್ರೌಢಶಾಲೆ ಆವರಣದಲ್ಲಿ ಸುಮಾರು ₹1.50 ಲಕ್ಷದ ಶೌಚಾಲಯ ಕಾಮಗಾರಿ ಕಳಪೆಯಿಂದ ಕೂಡಿದೆ. ಈ ಶೌಚಾಲಯಕ್ಕೆ ಪೈಪ್‌ಲೈನ್, ನೀರಿನ ವ್ಯವಸ್ಥೆ ಮಾಡದೆ, ಕಾಮಗಾರಿ ಪುರ್ಣಗೊಳಿಸಿ ಬಿಲ್ ಮಾಡಲಾಗಿದೆ. ಇದನ್ನು ಪ್ರಶ್ನಿಸಿದರೆ ಎಂಜಿನಿಯರ್ ಮತ್ತು ಗುತ್ತಿಗೆದಾರರು ಒಬ್ಬರ ಮೇಲೆ ಒಬ್ಬರು ದೂರುತ್ತಾರೆ. ಮುಗನಹುಣಸೆ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಕಳಪೆ ಕಾಮಗಾರಿ ನಡೆದಿದೆಎಂದು ಗ್ರಾಮಸ್ಥರಾದ ಮಾರುತಿ, ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ 6ಕ್ಕೂ ಹೆಚ್ಚು ಸೇತುವೆ ನಿರ್ಮಿಸಿದ್ದು ಎಲ್ಲವೂ ಕಳಪೆ ಕಾಮಗಾರಿಯಿಂದ ಕೂಡಿವೆ. ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇವರ ಕಾಮಗಾರಿಗಳನ್ನು ಕಿತ್ತುಹಾಕಿ ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರಾದ ದಯಾನಂದ್, ಯೋಗೀಶ್, ಆನಂದ್, ಕಿಶೋರ್, ಮೋಹನ್, ಪುನೀತ್, ರವಿಕುಮಾರ್, ಪರಮೇಶ್, ದೀಪು, ಲೋಕೇಶ್, ಮಂಜುನಾಥ್, ಕುಮಾರ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.