ADVERTISEMENT

ಸುರಕ್ಷಾ ಸಾಧನ; ಪೌರಕಾರ್ಮಿಕರ ಪ್ರತಿಭಟನೆ

ಸೀಲ್‌ಡೌನ್, ಕ್ವಾರಂಟೈನ್ ಮತ್ತು ಆಸ್ಪತ್ರೆಗಳ ಐಸೋಲೇಷನ್ ಘಟಕಗಳಲ್ಲಿ ಕೆಲಸ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 15:12 IST
Last Updated 29 ಜೂನ್ 2020, 15:12 IST
ಸೂಕ್ತ ರಕ್ಷಣೆ ಮತ್ತು ಸುರಕ್ಷಾ ಸಾಧನಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪೌರಕಾರ್ಮಿಕರು ಪ್ರತಿಭಟಿಸಿದರು
ಸೂಕ್ತ ರಕ್ಷಣೆ ಮತ್ತು ಸುರಕ್ಷಾ ಸಾಧನಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪೌರಕಾರ್ಮಿಕರು ಪ್ರತಿಭಟಿಸಿದರು   

ತುಮಕೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೀಲ್‍ಡೌನ್, ಕ್ವಾರಂಟೈನ್ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಮತ್ತು ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ಸುರಕ್ಷಾ ಸಾಧನಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪೌರಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ, ‘ಪೌರ ಕಾರ್ಮಿಕರು, ಕಸದ ಆಟೊ ಚಾಲಕರು, ಸಹಾಯಕರು, ಯುಜಿಡಿ ಕಾರ್ಮಿಕರು, ನೀರು ಸರಬರಾಜು ವಿಭಾಗದಲ್ಲಿ ದುಡಿಯುತ್ತಿರುವ ಕೆಲಸಗಾರರು ಮತ್ತು ಚಾಲಕರಿಗೆ ಕೂಡಲೇ ‘ಪಿ-19’ ಮಾಸ್ಕ್, ಕೈಗವಸು ನೀಡಬೇಕು. ಕಾಲಕಾಲಕ್ಕೆ ಅಗತ್ಯವಿರುವಷ್ಟು ಸುರಕ್ಷಾ ಸಲಕರಣೆಗಳನ್ನು ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.

ಕಾರ್ಮಿಕ ಕಾನೂನುಗಳ ಅನ್ವಯ ದುಡಿಯುತ್ತಿರುವ ನೇರಪಾವತಿ, ದಿನಗೂಲಿ, ಗುತ್ತಿಗೆ, ಹೊರ ಗುತ್ತಿಗೆ ಅಧಾರಿತ ಪೌರಕಾರ್ಮಿಕರಿಗೆ ಕನಿಷ್ಠ ಕೂಲಿ, ವಾರದ ರಜೆ, ಅನಾರೋಗ್ಯ ರಜೆ, ಗಳಿಕೆ ರಜೆ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಸಂಬಳ ನೀಡಬೇಕು. ಕೊರೊನಾ ಕೆಲಸದಲ್ಲಿ ತೊಡಗಿದ್ದಾಗ ಮರಣ ಹೊಂದಿರುವ ಪೌರಕಾರ್ಮಿಕರ ಕುಟುಂಬಗಳಿಗೆ ₹ 30 ಲಕ್ಷ ವಿಮೆ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ದಾನಿಗಳು ನೀಡಿರುವ ಸಮವಸ್ತ್ರಗಳನ್ನು ಹೊರತುಪಡಿಸಿ ಮಹಾನಗರ ಪಾಲಿಕೆಯು ಸಮವಸ್ತ್ರಗಳನ್ನು ನೀಡಿಲ್ಲ. ಸ್ನಾನಗೃಹಗಳಲ್ಲಿ ಸ್ನಾನ ಮಾಡಲು ಅವಕಾಶ ಕಲ್ಪಿಸಿಲ್ಲ. ಆರೋಗ್ಯ ತಪಾಸಣೆ ಮಾಡಿಲ್ಲ. ಪೌರಕಾರ್ಮಿಕರ ಕುಂದು ಕೊರತೆ ಆಲಿಸಿಲ್ಲ ಎಂದು ದೂರಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್ ನರಸಿಂಹರಾಜು, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆಕರೆಯಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಮುಖಂಡರಾದ ಎನ್.ಕೆ.ಸಬ್ರಹ್ಮಣ್ಯ, ಪೌರಕಾರ್ಮಿಕರ ಸಂಘದ ಸಹಕಾರ್ಯದರ್ಶಿ ನಾಗರಾಜು, ಖಜಾಂಚಿ ಸುರೇಂದ್ರ, ಕೆಂಪಣ್ಣ, ನಟರಾಜ್, ಅಂಜನಮೂರ್ತಿ, ನರಸಿಂಹಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.