
ತುಮಕೂರು: ಮುಂದಿನ ತಿಂಗಳು ನಡೆಯುವ ವಾರ್ಷಿಕ ಪರೀಕ್ಷೆಯ ಭಯದಲ್ಲಿಯೇ ಶಿಬಿರಕ್ಕೆ ಹಾಜರಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ಆತ್ಮಸ್ಥೈರ್ಯ ತುಂಬಿದರು. ಮಕ್ಕಳು ಧೈರ್ಯ, ಆತ್ಮವಿಶ್ವಾಸದಿಂದ ಶಾಲೆಗಳ ಕಡೆಗೆ ಮರಳಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ಶಾಲಾ ಶಿಕ್ಷಣ ಇಲಾಖೆ ಹಾಗೂ ವರಿನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಸಹಯೋಗದಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರೇರಣಾ ಶಿಬಿರ ಪರೀಕ್ಷೆಯ ಮಾರ್ಗದರ್ಶನ ತೋರಿತು. ನಿರಂತರ ಓದು– ಅಭ್ಯಾಸ, ಪುನರ್ ಮನನದ ಪ್ರಾಮುಖ್ಯತೆ ತಿಳಿಸಿತು. ಮಕ್ಕಳಲ್ಲಿನ ಆತಂಕ, ಒತ್ತಡ ತಗ್ಗಿಸಿತು.
ಕಲಾಕ್ಷೇತ್ರ ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಬೆಳಿಗ್ಗೆ 9 ಗಂಟೆಯಿಂದಲೇ ವಿವಿಧ ಶಾಲೆಗಳ ಮಕ್ಕಳು ಶಿಬಿರದ ಕಡೆಗೆ ಹೆಜ್ಜೆ ಹಾಕಿದರು. ಸುಲಭವಾಗಿ ಪರೀಕ್ಷೆ ಎದುರಿಸುವ ವಿಧಾನಗಳನ್ನು ಕಂಡುಕೊಂಡರು. ವಿದ್ಯಾರ್ಥಿಗಳು ಅತ್ಯಂತ ಕಠಿಣ ವಿಷಯಗಳು ಎಂದು ಭಾವಿಸುವ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಬಗ್ಗೆ ವಿವರ ಪಡೆದುಕೊಂಡರು.
ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದರೆ ಎಷ್ಟು ಅಂಕ ಪಡೆಯಬಹುದು? ಪ್ರಶ್ನೆ ಪತ್ರಿಕೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಎದುರಾಗುತ್ತವೆ? ಉತ್ತರ ಬರೆಯಲು ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು? ಎಂಬುದನ್ನು ಅರಿತರು. ಸಂಪನ್ಮೂಲ ವ್ಯಕ್ತಿಗಳು ರೇಖಾಚಿತ್ರ, ಪಿಪಿಟಿ ಮುಖಾಂತರ ಹಲವು ವಿಷಯ, ವಿಚಾರಗಳ ಬಗ್ಗೆ ಚರ್ಚಿಸಿದರು.
ಆರಂಭದಲ್ಲೇ ತ್ಯಾಗಟೂರು ಸರ್ಕಾರಿ ಶಾಲೆ ಶಿಕ್ಷಕ ಎ.ಉಮಾಮಹೇಶ್ ಮಕ್ಕಳನ್ನು ತಮ್ಮತ್ತ ಸೆಳೆದರು. ಕನಸುಗಾರನಿಗಲ್ಲ, ಕೆಲಸಗಾರನಿಗೆ ಇಲ್ಲಿ ಬೆಲೆ ಹೆಚ್ಚು ಎನ್ನುವ ಮೂಲಕ ಪರೀಕ್ಷೆಗೆ ಮಕ್ಕಳನ್ನು ಅಣಿಗೊಳಿಸಿದರು. ಚಂಚಲ ಮನಸ್ಸಿದ್ದರೆ ದೇವರು ಬಂದರೂ ಏನೂ ಮಾಡಲು ಆಗುವುದಿಲ್ಲ. ಗಮನ, ಛಲ, ಪ್ರಯತ್ನ ಎಲ್ಲವೂ ಗುರಿಯ ಕಡೆಗೆ ನೋಡುತ್ತಿರಬೇಕು. ತಲುಪಬೇಕಾದ ಗುರಿಯ ಸ್ಪಷ್ಟತೆ ಇರಬೇಕು ಎಂದು ಹೇಳುವ ಮೂಲಕ ಮಕ್ಕಳಲ್ಲಿ ಮತ್ತಷ್ಟು ಉತ್ಸಾಹ ತುಂಬಿದರು.
ವಾರ್ಷಿಕ ಪರೀಕ್ಷೆಗೂ ಮುನ್ನ ಎದುರಾಗುವ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ನಿಮ್ಮ ಸಾಮರ್ಥ್ಯ ತೋರಿಸಬೇಕು. ಯೋಚನೆ ಬದಲಾದರೆ, ಜೀವನ ದಿಕ್ಕು ಬದಲಾಗುತ್ತದೆ. ಅಂತಿಮ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆಯಬೇಕು ಎಂಬುವುದನ್ನು ಈಗಲೇ ನಿರ್ಧರಿಸಿ ಎಂದರು. ಇದಕ್ಕೆ ಸ್ಪಂದಿಸಿದ ಮಕ್ಕಳು ತಮಗೆ ಎಷ್ಟು ಅಂಕ ಬರಬಹುದು ಎಂಬುವುದನ್ನು ಪುಸ್ತಕದಲ್ಲಿ ಬರೆದುಕೊಂಡರು.
ದಿನಕ್ಕೆ ಕನಿಷ್ಠ 7 ಗಂಟೆ ನಿದ್ದೆ ಮಾಡಬೇಕು. ಸಾಮಾಜಿಕ ಜಾಲ ತಾಣದಿಂದ ದೂರವಿರಬೇಕು. ಪಠ್ಯ ಪುಸ್ತಕ ಓದಿ ನಿಮ್ಮ ಓದಿಗೆ ಅನುಕೂಲ ಆಗುವಂತೆ ಬರೆದುಕೊಳ್ಳಬೇಕು. ಮಾದರಿ ಪ್ರಶ್ನೆ ಪತ್ರಿಕೆ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ, ಪರೀಕ್ಷೆ ಕುರಿತು ಇಲಾಖೆಯ ವಿಡಿಯೊ ವೀಕ್ಷಿಸಬೇಕು. ಬರವಣಿಗೆ ಕೌಶಲ ರೂಢಿಸಿಕೊಳ್ಳಬೇಕು ಎನ್ನುತ್ತಾ ಹೆಚ್ಚಿನ ಅಂಕ ಪಡೆಯುವ ಗುಟ್ಟು ಬಿಚ್ಚಿಟ್ಟರು.
ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಜಿ, ತುಮಕೂರು ಆದರ್ಶ ನಗರದ ಶಿರಡಿ ಸಾಯಿ ಬಾಬಾ ಮಂದಿರದ ಅಧ್ಯಕ್ಷ ನಟರಾಜ ಶೆಟ್ಟಿ ನೇತೃತ್ವದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಮತ್ತೆ ಮತ್ತೆ ಬರೆಯಿರಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅತ್ಯಂತ ಸುಲಭದ ವಿಷಯ ಗಣಿತ. ವರ್ಜಿಸುವ ವಿಧಾನ ಮತ್ತು ನಕ್ಷೆಯ ವಿಧಾನ ಕಲಿತರೆ ಆರು ಅಂಕ ಪಡೆಯಬಹುದು. ಒಂದು ಲೆಕ್ಕದಿಂದ 6 ಅಂಕ ನೀಡುವ ಬೇರೆ ವಿಷಯ ಇದೆಯಾ? ಎಂದು ಕಾಟೇನಹಳ್ಳಿ ಸರ್ಕಾರಿ ಶಾಲೆ ಗಣಿತ ಶಿಕ್ಷಕ ಬಿ.ಟಿ.ರಂಗನಾಥ್ ಮಾಹಿತಿ ನೀಡಿದರು. ಪ್ರಮೇಯ ತ್ರಿಭುಜ ಕಲಿತರೆ 10ರಿಂದ 15 ಅಂಕ ಸುಲಭವಾಗಿ ಪಡೆಯಬಹುದು. ಪರೀಕ್ಷೆಯಲ್ಲಿ ಎದುರಾಗುವ ಒಂದು ಅಂಕದ ಪ್ರಶ್ನೆ ನಿರ್ಲಕ್ಷಿಸದೆ ಉತ್ತರಿಸಬೇಕು. 2 ಪಾಠ ಬಿಟ್ಟರೆ ಉಳಿದ 11 ಪಾಠಗಳಿಂದ 2 ಅಂಕ ಪ್ರಶ್ನೆಗಳು ಬರುತ್ತವೆ. ಮತ್ತೆ ಮತ್ತೆ ಅಭ್ಯಾಸ ನಡೆಸಿದರೆ ಗಣಿತ ತುಂಬಾ ಸುಲಭ ಆಗುತ್ತದೆ ಎಂದು ಮನದಷ್ಟು ಮಾಡಿಕೊಟ್ಟರು.
ಮಾದರಿ ಪರೀಕ್ಷೆಯಿಂದ 49 ಅಂಕ
ಈವರೆಗೆ ನಡೆಸಿದ ಮಾದರಿ ಪರೀಕ್ಷೆಗಳಿಂದ ಸರಿಯಾಗಿ ಅಭ್ಯಾಸ ಮಾಡಿದರೆ ವಿಜ್ಞಾನ ವಿಷಯದಲ್ಲಿ 49–50 ಅಂಕಗಳನ್ನು ಪಡೆಯಬಹುದು. ಹೀಗಾಗಿ ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ವರಿನ್ ಶಾಲೆ ಶಿಕ್ಷಕ ಕೆ.ಎಂ.ಮಂಜುನಾಥ್ ತಿಳಿಸಿದರು. ಚಿತ್ರಗಳನ್ನು ಚೆನ್ನಾಗಿ ಕಲಿಯಬೇಕು. ವಿಜ್ಞಾನ ವಿಷಯದಲ್ಲಿ ವಿಧಾನಗಳು ತುಂಬಾ ಮುಖ್ಯವಾಗುತ್ತವೆ. ನಿಮಗೆ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆದರೆ ಕೊನೆಯಲ್ಲಿ ನಿರಾಳವಾಗಿ ಇರಬಹುದು ಎಂದರು. ವರಿನ್ ಶಾಲೆಯ ಚಾರ್ಲ್ಸ್ ಸ್ಟೀಫನ್ ಇಂಗ್ಲಿಷ್ ವಿಷಯದ ಕುರಿತು ಮಾಹಿತಿ ಹಂಚಿಕೊಂಡರು. ಪ್ರಬಂಧ ವ್ಯಾಕರಣ ಪದ್ಯಗಳಿಗೆ ಒತ್ತು ನೀಡುವಂತೆ ಸಲಹೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.