ADVERTISEMENT

ಸಂಸದರ ಮೇಲಿನ ಆರೋಪಕ್ಕೆ ಸಾಕ್ಷಿ ತನ್ನಿ: ಶಾಸಕ ಶ್ರೀನಿವಾಸ್‌ಗೆ ಬಿಜೆಪಿ ಸವಾಲು

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಂಚಾಕ್ಷರಿ ಸವಾಲು

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 4:23 IST
Last Updated 30 ಜುಲೈ 2020, 4:23 IST
   

ಗುಬ್ಬಿ: ‘ಸಂಸದ ಜಿ.ಎಸ್.ಬಸವರಾಜ್‌ ಅವರು ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳ ಬಳಿ ಲಂಚ ಪಡೆದು ತಾಲ್ಲೂಕಿಗೆ ಕರೆ ತಂದಿದ್ದಾರೆ. ಆದ್ದರಿಂದ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದೀರಿ. ಅದನ್ನು ದಾಖಲೆ ಸಮೇತ ಸಾಬೀತು ಮಾಡಿ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಂಚಾಕ್ಷರಿ ಅವರು ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಸವಾಲು ಹಾಕಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರದ ಮೂಲ ನೀವೇ. ತಾಲ್ಲೂಕಿನಲ್ಲಿ 20 ವರ್ಷಗಳಿಂದ ಅಧಿಕಾರಿಗಳನ್ನು ಕರೆ ತರಲು ಎಷ್ಟು ಲಂಚ ತಗೆದುಕೊಂಡಿದ್ದೀರಿ ಎಂದು ನಿಮಗೆ ಗೊತ್ತಿಲ್ಲವೇ. ಮೊದಲು ನಿಮ್ಮ ಬಗ್ಗೆ ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಿ. ಆನಂತರ ಇನ್ನೊಬ್ಬರ ಬಗ್ಗೆ ಮಾತನಾಡಿ’ ಎಂದು ಕಿಡಿಕಾರಿದರು.

ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ‘ಇಡೀ ತಾಲ್ಲೂಕು ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ. ಒಬ್ಬ ತಳಮಟ್ಟದ ಅಧಿಕಾರಿಯನ್ನು ರೈತರು ಸಣ್ಣ ಕೆಲಸಕ್ಕಾಗಿ ಸಾವಿರಾರು ರೂಪಾಯಿ ಲಂಚ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೊದಲು ಅದನ್ನು ತಡೆಯಿರಿ. ಅಧಿಕಾರಿಗಳು ತಪ್ಪು ಮಾಡಿದರೆ ಪ್ರಶ್ನಿಸಿ ಕ್ರಮ ತಗೆದುಕೊಳ್ಳಲು ನಿಮಗೆ ಹಕ್ಕಿದೆ. ನಿಮ್ಮಲ್ಲಿ ಶಕ್ತಿ ಇದ್ದರೆ ಲಂಚ ಪಡೆಯುವವರ ವಿರುದ್ಧ ಕ್ರಮ ತಗೆದುಕೊಳ್ಳಿ’ ಎಂದು ಆಗ್ರಹಿಸಿದರು.

ADVERTISEMENT

‘ಹೌದು, ನೀವು ಯಾವತ್ತೂ ಯಾರಿಂದಲೂ ಬಿಡಿಗಸೂ ಮುಟ್ಟಿಲ್ಲ. ಆದರೆ, ಹಿಂಬಾಗಿಲಿನಿಂದ ನಿಮ್ಮ ಪತ್ನಿಯನ್ನು ಬಿಟ್ಟು ಲಂಚ ಪಡೆದುಕೊಳ್ಳುತ್ತೀರಿ. ಹಾಗಾಗಿ ನೀವು ಹೇಗೆ ಲಂಚ ಪಡೆದಂತಾಗುತ್ತದೆ ಬಿಡಿ’ ಎಂದು ವ್ಯಂಗ್ಯ ಮಾಡಿದರು.

ಜಿ.ಪಂ ಮಾಜಿ ಸದಸ್ಯ ಚಂದ್ರಶೇಖರ್ ಬಾಬು, ಬಿಜೆಪಿ ಮಾಜಿ ಅಧ್ಯಕ್ಷ ಭೈರಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಕೃಷ್ಣ ಮೂರ್ತಿ, ಮುಖಂಡ ಎನ್.ಸಿ.ಪ್ರಕಾಶ್ ಮಾತನಾಡಿದರು.

ಜಿ.ಪಂ ಸದಸ್ಯ ಜಿ.ಎಚ್ ಜಗನ್ನಾಥ್, ಅಣ್ಣಪ್ಪಸ್ವಾಮಿ, ತಿಮ್ಮಯ್ಯ,
ಕಿಡಿಗಣ್ಣಪ್ಪ, ಯತೀಶ್, ಬಲರಾಮಣ್ಣ, ಶಿವಕುಮಾರ್ ಜಿ.ಎಸ್, ಚಂದ್ರಮೌಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.