ADVERTISEMENT

ಕನ್ನಡ ಜನ ಮಾರ್ಗ ‘ಕವಿರಾಜಮಾರ್ಗ’: ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 4:35 IST
Last Updated 19 ಡಿಸೆಂಬರ್ 2023, 4:35 IST
<div class="paragraphs"><p>ತುಮಕೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ‘ಶ್ರೀ ವಿಜಯ ವಿರಚಿತ ಕವಿರಾಜಮಾರ್ಗ-125’ ವಿಚಾರ ಸಂಕಿರಣವನ್ನು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು</p></div>

ತುಮಕೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ‘ಶ್ರೀ ವಿಜಯ ವಿರಚಿತ ಕವಿರಾಜಮಾರ್ಗ-125’ ವಿಚಾರ ಸಂಕಿರಣವನ್ನು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು

   

ತುಮಕೂರು: ಸಮಾಜದಲ್ಲಿ ಅಸಹಿಷ್ಣುತೆ, ಧರ್ಮ ದ್ವೇಷ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ‘ಅನ್ಯ ವಿಚಾರ, ಧರ್ಮ ಸಹಿಸುವುದೇ ನಿಜವಾದ ಬಂಗಾರ’ ಎಂದು ಹೇಳಿದ ಕವಿರಾಜಮಾರ್ಗ ಕೃತಿಯ ಸಾಲುಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದಲ್ಲಿ ಸೋಮವಾರ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ಶ್ರೀವಿಜಯ ವಿರಚಿತ ಕವಿರಾಜಮಾರ್ಗ–125 ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಇವತ್ತಿನ ಸಾಮಾಜಿಕ ಪ್ರಜಾಪ್ರಭುತ್ವ, ಪರಧರ್ಮ ಸಹಿಷ್ಣುತೆಯ ಪರಿಕಲ್ಪನೆ, ಜನ ಸಾಮಾನ್ಯರ ಕುರಿತು ಪ್ರತಿಪಾದಿಸುವ ಮೌಲ್ಯಗಳಿಗೆ ಒಂದು ಬೀಜಭೂಮಿಕೆಯ ಒಳಹುಗಳು ಕವಿರಾಜಮಾರ್ಗದಲ್ಲಿವೆ. ಇದು ಕೇವಲ ಸಾಹಿತ್ಯ ಮೀಮಾಂಸೆಯ, ಕಾವ್ಯಾಲಂಕಾರದ ಕೃತಿ ಮಾತ್ರವಲ್ಲ. ಕನ್ನಡ ಭಾಷಿಕ ವಿಮೋಚನೆಗೆ ಹೊಸ ಹಾದಿ ತೋರಿಸಿದ, ಅನೇಕ ಸಾಮಾಜಿಕ ಸಂಗತಿಗಳನ್ನು ಒಳಗೊಂಡ ಕೃತಿ. ಕವಿರಾಜ ಮಾರ್ಗವನ್ನು ಸಾಮಾಜಿಕ ಪಠ್ಯವಾಗಿ ವಿಶ್ಲೇಷಿಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ಸಂಸ್ಕೃತದ ಬಿಗಿ ಹಿಡಿತದಿಂದ ವಿಮೋಚನೆಗೊಳ್ಳುವ ಮಾರ್ಗವನ್ನು ಕವಿರಾಜಮಾರ್ಗ ಕೃತಿ ತೋರುತ್ತದೆ. ಕೇಳುಗರ, ಓದುಗರ, ನೋಡುಗರ ಕುರಿತು ಇರುವ ಗೌರವ ಪ್ರಜಾಸತ್ತಾತ್ಮಕ ಗೌರವ. ಆ ಗೌರವವನ್ನು ಜನ ಸಾಮಾನ್ಯರಿಗೆ ಕವಿರಾಜಮಾರ್ಗ ಕೊಟ್ಟಿದೆ ಎಂದರು. ಕೃತಿಯ ಕುರಿತು ಮಹತ್ವದ ಚರ್ಚೆಗಳು ನಡೆಯಲಿಲ್ಲ.‌ ಅದಕ್ಕೆ ಅನೇಕ ಕಾರಣಗಳಿವೆ. ಇತ್ತೀಚೆಗೆ ಹಳೆಗನ್ನಡ ಕುರಿತ ಚರ್ಚೆ, ಅಧ್ಯಯನ, ಸಂಶೋಧನೆಗಳು ಕ್ಷೀಣಿಸುತ್ತಿವೆ. ಹಳೆಗನ್ನಡವನ್ನು ಮರು ಕಟ್ಟುವ ಕೆಲಸ ಮಾಡಿದ್ದೇವೆಯೇ? ಎಂಬ ಪ್ರಶ್ನಿಸಿದರು.

ಇಂದಿನ ಬಹುತೇಕರು ‘ಬಹುತ್ವ’ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಕವಿರಾಜಮಾರ್ಗದಲ್ಲಿ ಈ ಪದವನ್ನು ಮೊದಲು ಬಳಸಲಾಗಿತ್ತು. ಕೃತಿಯಲ್ಲಿ ಪ್ರಾದೇಶಿಕ, ಸಾಂಸ್ಕೃತಿಕ ಅಸ್ಮಿತೆಗೂ ಪ್ರಾಮುಖ್ಯತೆ ನೀಡಲಾಗಿದೆ. ಜನ ಸಾಮಾನ್ಯರ ವಿವೇಕಕ್ಕೆ ಹೆಚ್ಚಿನ ಗೌರವ ಕೊಟ್ಟಿದ್ದಾರೆ ಎಂದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಬರಗೂರು ರಾಮಚಂದ್ರಪ್ಪ ನಾಡಿನ ಹೆಸರಾಂತ ಮೇಷ್ಟ್ರು. ಅವರ ಸರಳತೆ, ಪ್ರಾಮಾಣಿಕತೆಯನ್ನು ಎಲ್ಲರು ಮೈಗೂಡಿಸಿಕೊಳ್ಳಬೇಕು. ಶಿಕ್ಷಕರಿಗೆ ಬರಗೂರು ಮಾದರಿ.‌ ಯುವ ಸಮೂಹ ಸಂಶೋಧನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ವಿ.ವಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ನಾಗಭೂಷಣ ಬಗ್ಗನಡು, ‘ಪ್ರಾಚೀನ ಪಠ್ಯಗಳನ್ನು ಮರು ಓದಿಗೆ ಅಳವಡಿಸಿಕೊಳ್ಳಬೇಕು. ಕವಿರಾಜಮಾರ್ಗದ ಕುರಿತ ಚರ್ಚೆಗೆ ವಿವಿಧ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ’ ಎಂದರು.

ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಪ್ರಕಾಶ್‌ ಎಂ.ಶೇಟ್‌, ಕನ್ನಡ ವಿಭಾಗದ ಮುಖ್ಯಸ್ಥ ವೆಂಕಟರೆಡ್ಡಿ ರಾಮರೆಡ್ಡಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.