ADVERTISEMENT

ಅಂಬೇಡ್ಕರ್ ಮಾರ್ಗದಿಂದ ಪ್ರಗತಿ: ಬಿ.ಜಿ.ಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:18 IST
Last Updated 19 ಏಪ್ರಿಲ್ 2021, 4:18 IST
ಅಂಬೇಡ್ಕರ್ ಭಾವಚಿತ್ರಕ್ಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಪುಷ್ಪನಮನ ಸಲ್ಲಿಸಿದರು
ಅಂಬೇಡ್ಕರ್ ಭಾವಚಿತ್ರಕ್ಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಪುಷ್ಪನಮನ ಸಲ್ಲಿಸಿದರು   

ತುಮಕೂರು: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್, ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಂ ಜಯಂತಿ ಆಚರಿಸುವುದರಿಂದ ಪ್ರಗತಿ ಆಗುವುದಿಲ್ಲ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಪ್ರಗತಿ ಸಾಧ್ಯವಾಗಲಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ, ಪರಿಶಿಷ್ಟ ಜಾತಿ, ಪಂಗಡ ಸರ್ಕಾರಿ ನೌಕರರ ಸಂಘದ ತುಮಕೂರು ಶಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್, ಬಾಬು ಜಗಜೀವನ ರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್, ಜಗಜೀವನ ರಾಂ ಅವರನ್ನು ಏಪ್ರಿಲ್ ತಿಂಗಳಲ್ಲಿ ನೆನಪು ಮಾಡಿಕೊಳ್ಳುತ್ತೇವೆ. ಆದರೆ ಪ್ರತಿನಿತ್ಯ ಅವರನ್ನು ಪೂಜಿಸಬೇಕು. ದಲಿತರೆಂಬ ಕೀಳರಿಮೆ ಬಿಡಬೇಕು. ಮಹಾಭಾರತ, ರಾಮಾಯಣ ಬರೆದವರು ದಲಿತರೇ. ದೇಶಕ್ಕೆ ಸಂವಿಧಾನ ಕೊಟ್ಟಂತಹವರು ದಲಿತರೇ ಎಂದು ನೆನಪು ಮಾಡಿಕೊಂಡರು.

ADVERTISEMENT

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಆರ್.ರಾಜಶೇಖರ್, ‘ಇತಿಹಾಸದ ಪುಟಗಳನ್ನು ತೆರೆದು ನೋಡಿ, ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ತನ್ನ ಜೀವನ ಹೇಗೆ ನಲುಗಿತು ಎಂಬುದನ್ನು ಅಂಬೇಡ್ಕರ್ ಅರಿತುಕೊಂಡರು. ನೋವುಂಡು ಸಂವಿಧಾನ ರಚಿಸಿಕೊಟ್ಟರು’ ಎಂದು ಸ್ಮರಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣ, ‘ಶೋಷಿತ ಸಮುದಾಯಗಳ ಪರವಾಗಿ ಅಂಬೇಡ್ಕರ್ ಹೋರಾಟ ಮಾಡಿದರು’ ಎಂದರು.

ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಎ.ಟಿ.ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷ ಆರ್.ವೆಂಕಟಪ್ಪ, ಡಾ.ಎಚ್.ವಿ.ರಂಗಸ್ವಾಮಿ, ಆಡಳಿತಾಧಿಕಾರಿ ಕೆ.ಎಚ್.ಭೂತರಂಗಪ್ಪ, ಡಾ.ಎಸ್.ರುದ್ರಮೂರ್ತಿ, ರಂಗನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.