ADVERTISEMENT

ಡಿಸಿಎಂ ಕ್ಷೇತ್ರದಲ್ಲಿ ನೀರಿಗೆ ಹಾಹಾಕಾರ:ದೇವಲಾಪುರ ಗ್ರಾ.ಪಂಗೆ ಬೀಗಜಡಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 11:37 IST
Last Updated 30 ಏಪ್ರಿಲ್ 2019, 11:37 IST
ಕೋರ ಹೋಬಳಿ ದೇವಲಾಪುರ ಗ್ರಾಮದ ಮಹಿಳೆಯರು ಕುಡಿಯುವ ನೀರಿಗೆ ಒತ್ತಾಯಿಸಿ ಗ್ರಾಮಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು
ಕೋರ ಹೋಬಳಿ ದೇವಲಾಪುರ ಗ್ರಾಮದ ಮಹಿಳೆಯರು ಕುಡಿಯುವ ನೀರಿಗೆ ಒತ್ತಾಯಿಸಿ ಗ್ರಾಮಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು   

ಕೋರ: ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಬಿಗಡಾಯಿಸಿದೆ.

ಹೋಬಳಿ ದೇವಲಾಪುರ ಗ್ರಾಮದಲ್ಲಿ ತೀವ್ರ ಅಭಾವ ಉಂಟಾಗಿದ್ದು, ನೀರಿಗೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಖಾಲಿ ಕೊಡ ಪ್ರದರ್ಶಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಶಾಮಿಯಾನ ಹಾಕಿ ಅಡುಗೆ ಮಾಡಿ, ಖಾಲಿ ಕೊಡಗಳನ್ನು ಇಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಘೋಚಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸಂಕ್ರಾಂತಿ ಹಬ್ಬದಿಂದ ದೇವಲಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಮನವಿ ಮಾಡಿದ್ದೆದವು. ನಮ್ಮ ಮನವಿಗೆ ಸ್ಪಂದನೆ ದೊರೆತಿಲ್ಲ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ನೀಡಿದ್ದೇವೆ, ಒಂದು ಮನೆಗೆ 8 ಬಿಂದಿಗೆ ನೀರು ನಿಗದಿ ಮಾಡಿ ವಿತರಿಸುತ್ತಿದ್ದಾರೆ. ಪಂಚಾಯಿತಿಗೆ ನೀರಿನ ತೆರಿಗೆ ಕಟ್ಟಿದರೂ ಬಿಂದಿಗೆ ಹಿಡಿದು ನೀರಿಗೆ ಅಲೆಯುವುದು ತಪ್ಪಿಲ್ಲ ಎಂದು ಪ್ರತಿಭಟನಾ ನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವರ್ತನೆಯಿಂದ ಬೇಸತ್ತು ನಾವು ಗ್ರಾಮ ಪಂಚಾಯಿತಿಗೆ ಬೀಗ ಹಾಕಿದ್ದೇವೆ. ಪ್ರತಿಭಟನೆ ಮಾಡುತ್ತಿದ್ದರೂ ಪಿಡಿಒ ಸ್ಥಳಕ್ಕೆ ಬಂದು ವಿಚಾರಿಸಲಿಲ್ಲ. ಸಮಸ್ಯೆ ಬಗೆಹರಿಯುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಗ್ರಾಮಸ್ಥೆ ಅನ್ನದಾನಮ್ಮ ತಿಳಿಸಿದರು.

‘ಹೀಗೆ ಏಕಾಏಕಿ ಧರಣಿ ಮಾಡುವುದು ತಪ್ಪು’ ಎಂದು ಕೋರ ಠಾಣೆ ಸಬ್‌ಇನ್‌ಸ್ಪೆಕ್ಟರ್ ಶೇಷಾದ್ರಿ ಮನವಿ ಮಾಡಿದರೂ ಮಹಿಳೆಯರು ಅವರ ಮನವಿಯನ್ನು ಪರಿಗಣಿಸದೆ ಸಂಬಂಧ ಪಟ್ಟ ಇಲಾಖೆ ಉನ್ನತಾಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.