ADVERTISEMENT

ಕೆರೆಗಳಿಗೆ ನೀರು ಹರಿಸಲು ಆಗ್ರಹ

ಬೆಳ್ಳಾವಿ ಸುತ್ತಲಿನ 8 ಕೆರೆಗಳಿಗೆ ನೀರು; ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 13:30 IST
Last Updated 3 ಡಿಸೆಂಬರ್ 2018, 13:30 IST
ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರಿಗೆ ಕೆರೆಗಳಿಗೆ ನೀರು ಹರಿಸುವಂತೆ ಕಾರದ ಮಠದ ಸ್ವಾಮೀಜಿ ಮನವಿ ಮಾಡಿದರು.
ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರಿಗೆ ಕೆರೆಗಳಿಗೆ ನೀರು ಹರಿಸುವಂತೆ ಕಾರದ ಮಠದ ಸ್ವಾಮೀಜಿ ಮನವಿ ಮಾಡಿದರು.   

ತುಮಕೂರು: ಬೆಳ್ಳಾವಿ ಸುತ್ತಲಿನ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಸಬೇಕು ಹಾಗೂ ಗ್ರಾಮದ ಎಸ್‌ಬಿಐ ಶಾಖೆಯನ್ನು ವಸಂತ ನರಸಾಪುರಕ್ಕೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿ ಸೋಮವಾರ ಗ್ರಾಮದಲ್ಲಿ ಗ್ರಾಮಸ್ಥರು ಪ್ರತಿಭಟಿಸಿದರು.

ಬೆಳ್ಳಾವಿ, ಸೋರೆಕುಂಟೆ, ಚನ್ನೇನಹಳ್ಳಿ, ದೊಡ್ಡೇರಿ, ಜಿ.ಗೊಲ್ಲಹಳ್ಳಿ, ದೊಡ್ಡವೀರನಹಳ್ಳಿ, ನೆಲಹಾಳ್, ಬಳ್ಳಾಪುರ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ತುಂಬಿಸುವ ಯೋಜನೆಯಿದ್ದರೂ ಇದುವರೆಗೂ ನೀರು ಹರಿದಿಲ್ಲ. ಈ ಹಿನ್ನೆಲೆಯಲ್ಲಿ ಈ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಮಾತನಾಡಿ, ‘ನೀರು ತುಂಬಿಸಲು ಸಂಬಂಧಪಟ್ಟ ಸಚಿವರು, ಉಪಮುಖ್ಯಮಂತ್ರಿ ಪರಮೇಶ್ವರ ಹಾಗೂ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವುದಾಗಿ’ ಭರವಸೆ ನೀಡಿದರು.

ADVERTISEMENT

‘ಬ್ಯಾಂಕಿನ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಶಾಖೆ ಸ್ಥಳಾಂತರ ಮಾಡುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲ ಅಧಿಕಾರಿಗಳನ್ನು ಅಭಿನಂದಿಸುವೆ’ ಎಂದು ಹೇಳಿದರು.

ಹೇಮಾವತಿ ಯೋಜನೆಯಿಂದ ಬೆಳ್ಳಾವಿ ಸುತ್ತ ಮುತ್ತಲ ಕೆರೆಗಳಿಗೆ ಕುಡಿಯುವ ನೀರು ತುಂಬಿಸುವ ಯೋಜನೆ ರೂಪಿಸಿ ವರ್ಷಗಳೇ ಕಳೆದರೂ ಜಾರಿ ಸಾಧ್ಯವಾಗಿಲ್ಲ. ಎತ್ತಿನಹೊಳೆ ಯೋಜನೆ ಹತ್ತಿರದಲ್ಲಿಯೇ ಹಾದು ಹೋಗುವುದರಿಂದ, ಮೇಲಿನ ಕೆರೆಗಳಿಗೆ ನೀರು ಹರಿಸಿದರೆ ಪ್ರಯೋಜನವಾಗುತ್ತದೆ ಎಂದರು.

‘ಈ ಸಂಬಂಧ ನೀರಾವರಿ ಸಚಿವರು, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವೆ’ ಎಂದರು.

ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಉಮೇಶ ಇದ್ದರು.

ಕಾಮಗಾರಿ ಪರಿಶೀಲನೆಗೆ ಬಂದ ಸಚಿವ ಕೃಷ್ಣಬೈರೇಗೌಡ ಅವರಿಗೂ ಗ್ರಾಮಸ್ಥರು ಈ ಕುರಿತು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.