ADVERTISEMENT

ರಾಜಣ್ಣ ವಿರುದ್ಧದ ಪ್ರತಿಭಟನೆ ಮುಂದಕ್ಕೆ

ಜಿಲ್ಲಾ ಜಾತ್ಯತೀತ ಸ್ವಾಭಿಮಾನಿ ವೇದಿಕೆ ಸಂಚಾಲಕ ಕೆಂಚಮಾರಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 16:33 IST
Last Updated 9 ಜೂನ್ 2019, 16:33 IST
ಕೆಂಚಮಾರಯ್ಯ
ಕೆಂಚಮಾರಯ್ಯ   

ತುಮಕೂರು: ‘ದಲಿತ ಸಮುದಾಯದ ಪ್ರಮುಖ ಮುಖಂಡರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಜೂ.12ರಂದು ನಡೆಸಲು ಉದ್ದೇಶಿಸಿದ್ಧ ಪ್ರತಿಭಟನಾ ಸಮಾವೇಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ’ ಎಂದು ತುಮಕೂರು ಜಿಲ್ಲಾ ಜಾತ್ಯತೀತ ಸ್ವಾಭಿಮಾನಿ ವೇದಿಕೆ ಸಂಚಾಲಕ ಕೆಂಚಮಾರಯ್ಯ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲ ಹಿರಿಯರು, ಆಪ್ತರ ಸಲಹೆಯ ಮೇರೆಗೆ ಈ ತೀರ್ಮಾನ ಮಾಡಲಾಗಿದೆ. ತಾತ್ಕಾಲಿಕವಾಗಿಯಷ್ಟೇ ಮುಂದೂಡಿದ್ದೇವೆ. ಮತ್ತೆ ದಿನಾಂಕ ನಿಗದಿಯಾದ ಬಳಿಕ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

‘ಪರಮೇಶ್ವರ ಅವರ ಬಗ್ಗೆ ಅತ್ಯಂತ ಹೀನವಾಗಿ ಹೇಳಿಕೆ ನೀಡಿದ್ದಲ್ಲದೆ ತಮ್ಮ ವಿರುದ್ಧ ಧಿಕ್ಕಾರ ಕೂಗಿದರೆ ನಾಲಿಗೆ ಸೀಳುತ್ತೇನೆ ಎಂದು ರಾಜಣ್ಣ ಹೇಳಿದ್ದರು. ಅವರ ಈ ಮಾತು ಮತ್ತು ಸರ್ವಾಧಿಕಾರಿ ಧೋರಣೆ ಸ್ವಾಭಿಮಾನಿಗಳಿಗೆ ಬೇಸರ ತರಿಸಿತು. ಹೀಗಾಗಿ, ಆ ಧೋರಣೆ ವಿರುದ್ಧ ಹೋರಾಟಕ್ಕೆ ವೇದಿಕೆಯು ಮುಂದಾಯಿತು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಾದ್ಯಂತ ಪಕ್ಷಾತೀತ, ಜಾತ್ಯತೀತವಾಗಿ ಎಲ್ಲ ಸಮುದಾಯದ ಮುಖಂಡರನ್ನು ಸಂಪರ್ಕಿಸಿ ಈ ಹೋರಾಟ ರೂಪಿಸಲಾಗಿದೆ. ಹೋರಾಟ ಹಿಂದಕ್ಕೆ ಪಡೆಯುವ ಪ್ರಶ್ನೆ ಇಲ್ಲ. ಆದರೆ, ಕೆಲ ಕಾರಣಾಂತರಗಳಿಂದ ಮುಂದೂಡಲಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಲಿ, ಪಕ್ಷದ ಮುಖಂಡರಾಗಲಿ ಪ್ರತಿಭಟನಾ ಸಮಾವೇಶ ಹಿಂದಕ್ಕೆ ಪಡೆಯಲು ಹೇಳಿಲ್ಲ. ಅವರಿಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ಪಕ್ಷದ ಮುಖಂಡರಾದ ನಾರಾಯಣಮೂರ್ತಿ, ಕೊಂಡವಾಡಿ ಚಂದ್ರಶೇಖರ್, ಸೋಮಣ್ಣ, ಅತೀಕ್ ಅಹಮ್ಮದ್, ಚಂದ್ರಶೇಖರಗೌಡ, ನರಸೀಯಪ್ಪ, ದಿನೇಶ್, ಸುಜಾತಾ, ಮಹೇಶ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.