ADVERTISEMENT

ಗುಬ್ಬಿ: ರೈತ ಸಂಘದಿಂದ ದಿಢೀರ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:30 IST
Last Updated 24 ಮೇ 2025, 14:30 IST
ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ರೈತಸಂಘದಿಂದ ಪ್ರತಿಭಟನೆ ನಡೆಯಿತು
ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ರೈತಸಂಘದಿಂದ ಪ್ರತಿಭಟನೆ ನಡೆಯಿತು   

ಗುಬ್ಬಿ: ಎಕ್ಸ್‌ಪ್ರೆಸ್ ಲಿಂಕ್ ಕಾಮಗಾರಿ ವಿರೋಧಿಸಿ ತಾಲ್ಲೂಕಿನ ಅತ್ತಿಕಟ್ಟೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ರೈತರು ಹಾಗೂ ಹೋರಾಟಗಾರರನ್ನು ವಶಕ್ಕೆ ಪಡೆಯುವ ಮೂಲಕ ಹೋರಾಟವನ್ನು ಹತ್ತಿಕ್ಕಲು ತಾಲ್ಲೂಕು ಆಡಳಿತ, ಜಿಲ್ಲಾ ಆಡಳಿತ ಹಾಗೂ ಪೊಲೀಸರ ಕ್ರಮ ಖಂಡಿಸಿ ಪಟ್ಟಣದ ಬಸ್ ನಿಲ್ದಾಣದ ಬಳಿ ರೈತ ಸಂಘದಿಂದ ಶನಿವಾರ ರಸ್ತೆ ತಡೆ ನಡೆಸಿದರು.

ತಾಲ್ಲೂಕಿನ ಜನರ ಜೀವನಾಡಿಯಾಗಿರುವ ಹೇಮಾವತಿ ನಾಲೆಯಿಂದ ಎಕ್ಸ್‌ಪ್ರೆಸ್ ಕೆನಾಲ್‌ ನಿರ್ಮಿಸಿ ನೀರು ತೆಗೆದುಕೊಂಡು ಹೋಗಲು ಸರ್ಕಾರ ಇದುವರೆಗೂ ಅಗತ್ಯವಿರುವ ಭೂಸ್ವಾಧೀನ ಮಾಡಿಲ್ಲ. ಅಧಿಕಾರಿಗಳು ಸಂಬಂಧಪಟ್ಟವರಿಗೆ ಈ ಸಂಬಂಧ ನೋಟಿಸ್ ನೀಡದೆ ಪೊಲೀಸರನ್ನು ಮುಂದಿಟ್ಟುಕೊಂಡು ಕಾಮಗಾರಿಗೆ ಮುಂದಾಗಿರುವುದು ದುರಂತ ಎಂದರು.

ಜಿಲ್ಲೆಯಲ್ಲಿ ಮೂವರು ಸಚಿವರು, ಆಡಳಿತ ಪಕ್ಷದ ಶಾಸಕರು ಇದ್ದರೂ, ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸದಿರುವುದು ದುರಂತ. ಶಾಸಕ ಎಸ್‌.ಆರ್. ಶ್ರೀನಿವಾಸ್ ಮೌನ ಸಮ್ಮತಿ ನೀಡಿದಂತಿದೆ. ಇದಕ್ಕೆ ಕ್ಷೇತ್ರದ ಮತದಾರರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ADVERTISEMENT

26ರಂದು ತುಮಕೂರಿನಲ್ಲಿ ಕರೆದಿರುವ ಸಭೆಯಲ್ಲಿ ಭಾಗವಹಿಸಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು. ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಸಚಿವರು ಹಾಗೂ ಮಠಾಧೀಶರನ್ನು ಹೋರಾಟದಲ್ಲಿ ಭಾಗಿಯಾಗುವಂತೆ ಕೋರಲಾಗುವುದು. ಕಾಮಗಾರಿ ನಿಲ್ಲಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದರು.

ಕಾಮಗಾರಿ ವಿರೋಧಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು, ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳಾದ ಮಂಜುನಾಥ್, ಸತ್ತಿಗಪ್ಪ, ಜಗದೀಶ್, ಗುರು ಚೆನ್ನಬಸವಣ್ಣ, ನಟರಾಜು, ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.