ಕುಣಿಗಲ್: ತಾಲ್ಲೂಕಿನ ಗೊಟ್ಟಗೆರೆ ಕೆರೆ ಸಂರಕ್ಷಣೆಗೆ ಆಗ್ರಹಿಸಿದ ಗ್ರಾಮಸ್ಥರು ಶನಿವಾರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದು, ಪೊಲೀಸ್ ಅಧಿಕಾರಿಗಳ ಮನವಿಗೆ ಸ್ಪಂದಿಸಿ ಪ್ರತಿಭಟನೆ ಹಿಂಪಡೆದಿದ್ದಾರೆ.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಮುರಳಿ, ತಾಲ್ಲೂಕಿನ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯವನ್ನು ಗೊಟ್ಟಿಗೆರೆ ಕೆರೆಗೆ ಬಿಡುತ್ತಿರುವ ಕಾರಣ ಕೆರೆ ಕುಲುಷಿತಗೊಂಡು ಸುತ್ತುಮುತ್ತಲ ಗ್ರಾಮಗಳಲ್ಲಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಈ ವ್ಯಾಪ್ತಿಯಲ್ಲಿ ಏಳು ಕೊಳವೆಬಾವಿಗಳನ್ನು ಕೊರೆದಿದ್ದರೂ ನೀರು ಕುಡಿಯಲು ಮತ್ತು ಬಳಕೆಗೂ ಯೋಗ್ಯವಾಗಿಲ್ಲ ಎಂದು ಸಂಬಂದಪಟ್ಟ ಇಲಾಖೆಯ ವರದಿಗಳು ಬಂದಿವೆ.
ಜನರು ಚರ್ಮರೋಗ ಸೇರಿದಂತೆ ಇತರೆ ರೋಗಗಳಿಂದ ಬಳಲುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಪ್ರಯೋಜನವಾಗದ ಕಾರಣ ಕೆರೆ ಸಂರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಸ್ಥಳಕ್ಕೆ ಸಿಪಿಐ ನವೀಣ್ ಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಮರಿಯಪ್ಪ ಭೇಟಿ ನೀಡಿ ಕಂದಾಯ, ಕೈಗಾರಿಕೆ ಮತ್ತು ಪರಿಸರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರಕ್ಕೆ ಕ್ರಮಕೂಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.