ADVERTISEMENT

ಒಳಮೀಸಲಾತಿ ಪೂರ್ಣ ಜಾರಿಗೆ ಆಗ್ರಹ: ತುಮಕೂರಿನಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 19:33 IST
Last Updated 23 ಫೆಬ್ರುವರಿ 2026, 19:33 IST
ಒಳ ಮೀಸಲಾತಿಗೆ ಆಗ್ರಹಿಸಿ ತುಮಕೂರಿನಲ್ಲಿ ಸೋಮವಾರ ಸಂಪೂರ್ಣ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು
ಒಳ ಮೀಸಲಾತಿಗೆ ಆಗ್ರಹಿಸಿ ತುಮಕೂರಿನಲ್ಲಿ ಸೋಮವಾರ ಸಂಪೂರ್ಣ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು   

ತುಮಕೂರು: ಒಳ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಒಳಮೀಸಲಾತಿ ಹೋರಾಟ ಸಮಿತಿ, ಜಿಲ್ಲಾ ಮಾದಾರ ಮಹಾಸಭಾ ನೇತೃತ್ವದಲ್ಲಿ ನಗರದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್ಕಾರದ ಧೋರಣೆ ವಿರುದ್ಧ ಘೋಷಣೆಗಳು ಮೊಳಗಿದವು. ನೀಲಿ ಬಣ್ಣದ ಬಾವುಟ ಹಾಗೂ ಶಾಲುಗಳು ಮೆರವಣಿಗೆಯಲ್ಲಿ ರಾರಾಜಿಸಿದವು.

ಪ್ರಮುಖರಾದ ಕೆ.ದೊರೈರಾಜ್, ವೈ.ಎಚ್.ಹುಚ್ಚಯ್ಯ, ಕೆಂಚಮಾರಯ್ಯ, ಗಂಗಹನುಮಯ್ಯ, ವೈ.ಕೆ.ಬಾಲಕೃಷ್ಣಪ್ಪ, ಕುಂದೂರು ತಿಮ್ಮಯ್ಯ, ಕೊಟ್ಟಶಂಕರ್, ರಾಜಸಿಂಹ, ಪಾವಗಡ ಶ್ರೀರಾಮ್, ನರಸಿಂಹಮೂರ್ತಿ, ಗಂಗರಾಜು, ಡಿ.ಟಿ.ವೆಂಕಟೇಶ್, ಡಾ.ಅರುಂದತಿ, ವೈ.ಕೆ.ತಿಪ್ಪೇಸ್ವಾಮಿ, ಕುಂದೂರು ಮುರುಳಿ ಇತರರು ಭಾಗವಹಿಸಿದ್ದರು.

ADVERTISEMENT

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮುಂದಿನ ಅಧಿವೇಶನದಲ್ಲಿ ಸಚಿವರು, ಶಾಸಕರು ಒತ್ತಡ ತರಬೇಕು ಎಂದು ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಮುಖರು ಒತ್ತಾಯಿಸಿದರು.

ಒಳ ಮೀಸಲಾತಿಗೆ ಆಗ್ರಹಿಸಿ ಸತತವಾಗಿ ಹೋರಾಟ ಮಾಡಿಕೊಂಡು ಬಂದಿದ್ದರೂ ಜಾರಿ ಮಾಡದೆ ವಿಳಂಬ ಮಾಡಲಾಗುತ್ತಿದೆ. ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ಅಸ್ಪಷ್ಟ ತೀರ್ಮಾನ ಕೈಗೊಳ್ಳುತ್ತದೆ ಎಂದು ಯಾರು ಭಾವಿಸಿರಲಿಲ್ಲ. ಈಗಲಾದರೂ ಸರಿಪಡಿಸಿ ಜಾರಿ ಮಾಡಬೇಕೆಂದು ಮುಖಂಡರು ಮನವಿ ಮಾಡಿದರು.

ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಹೋರಾಟದ ನೇತೃತ್ವ ವಹಿಸಿದ್ದ ಪ್ರಮುಖರು ಮಾತನಾಡಿದರು
ಪ್ರಮುಖ ಬೇಡಿಕೆಗಳು
  • ನೇರ ನೇಮಕಾತಿ ಜತೆಗೆ ಪದೋನ್ನತಿ, ಬ್ಯಾಕ್‌ಲಾಗ್ ಹುದ್ದೆ ಭರ್ತಿ, ಕೆಐಎಡಿಬಿ, ಬಿಡಿಎ ಹಾಗೂ ಸರ್ಕಾರಿ ಗುತ್ತಿಗೆ ಸೇರಿ ಎಲ್ಲ ವಲಯಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು

  • ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ), ಪರಿಶಿಷ್ಟ ಪಂಗಡದ ಉಪಯೋಜನೆ (ಟಿಎಸ್‌ಪಿ) ಅನುದಾನ 6:6:5 ಅನುಪಾತದಲ್ಲಿ ಹಂಚಿಕೆ ಆಗಬೇಕು

  • ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ನೀಡಬೇಕು. ಈ ಸಮುದಾಯಕ್ಕೆ ಪ್ರತ್ಯೇಕ ನಿಗಮ ಹಾಗೂ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು 

  • ಒಳಮೀಸಲಾತಿ ಮುಂದುವರಿಸಲು ಶಾಶ್ವತ ಆಯೋಗ ನೇಮಕ ಮಾಡಬೇಕು. ಮೀಸಲಾತಿ ಹೆಚ್ಚಳಕ್ಕೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು

  • ಒಳಮೀಸಲಾತಿ ಹೋರಾಟಗಾರರ ಮೇಲೆ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು 

  • ಆದಿ ಜಾಂಬವ ಅಭಿವೃದ್ಧಿ ನಿಗಮ, ಲಿಡ್ಕರ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೆ ತಲಾ ₹2 ಸಾವಿರ ಕೋಟಿ ಅನುದಾನ ಒದಗಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.