ADVERTISEMENT

ತುಮಕೂರು: ಪ್ರತಿಭಟನಾಕಾರರು ವಶಕ್ಕೆ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:30 IST
Last Updated 7 ಮೇ 2025, 15:30 IST
<div class="paragraphs"><p>ತುಮಕೂರು ತಾಲ್ಲೂಕು ಊರ್ಡಿಗೆರೆ ಉಪ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದರು</p></div>

ತುಮಕೂರು ತಾಲ್ಲೂಕು ಊರ್ಡಿಗೆರೆ ಉಪ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದರು

   

ತುಮಕೂರು: ಭೂಮಿ, ವಸತಿ, ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದವರನ್ನು ಪೊಲೀಸರು ಬುಧವಾರ ಬೆಳಗಿನ ಜಾವ ವಶಕ್ಕೆ ಪಡೆದು, ಸಂಜೆ ಬಿಡುಗಡೆ ಮಾಡಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಏ. 21ರಿಂದ ಧರಣಿ ಕೈಗೊಳ್ಳಲಾಗಿತ್ತು. ತುಮಕೂರು, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಶಿರಾ, ತುರುವೇಕೆರೆ ತಾಲ್ಲೂಕಿನ ಭೂಮಿ ಮತ್ತು ವಸತಿ ವಂಚಿತರು ಧರಣಿಯಲ್ಲಿ ಭಾಗವಹಿಸಿದ್ದರು.

ADVERTISEMENT

‘ನಿರಂತರ ಧರಣಿ, ಸಭೆ, ಮುಷ್ಕರ ನಡೆಸುವ ಮುನ್ನ ಪೊಲೀಸ್‌ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅನುಮತಿ ಪಡೆಯದಿದ್ದರೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮಂಗಳವಾರ ಆದೇಶಿಸಿದ್ದರು. ಆದೇಶ ಹೊರಬಿದ್ದ ಬೆನ್ನಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಾಕಿದ್ದ ಶಾಮಿಯಾನ, ಬ್ಯಾನರ್‌ ತೆರವುಗೊಳಿಸಿದರು. ಪ್ರತಿಭಟನಾಕಾರರನ್ನು ಊರ್ಡಿಗೆರೆ ಉಪ ಪೊಲೀಸ್ ಠಾಣೆಗೆ ಕರೆದೊಯ್ದರು. ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಠಾಣೆ ಮುಂದೆಯೇ ಪ್ರತಿಭಟನೆ ಮುಂದುವರಿಸಿದರು.

‘ಮೂಲಭೂತ ಸೌಲಭ್ಯ ಕೇಳುತ್ತಿರುವುದಕ್ಕೆ ನಮ್ಮನ್ನು ಒಕ್ಕೆಲೆಬ್ಬಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಧರಣಿ ಮಾಡಲು ಅವಕಾಶ ಇಲ್ಲವೇ? ಅಧಿಕಾರಿಗಳು ಬರೀ ಆಶ್ವಾಸನೆ, ಭರವಸೆ ನೀಡುತ್ತಿದ್ದಾರೆ ಹೊರೆತು ಯಾವುದೇ ಬೇಡಿಕೆ ಈಡೇರಿಸುತ್ತಿಲ್ಲ. ನಮ್ಮ ಹಕ್ಕು ಕೇಳಿದರೆ ತೊಂದರೆ ನೀಡುತ್ತಿದ್ದಾರೆ. ಯಾವುದೇ ಗಲಾಟೆ, ಗದ್ದಲ ಮಾಡದೆ ಪ್ರತಿಭಟನೆ ನಡೆಸುತ್ತಿದ್ದೇವೆ. ನೀರು, ಮನೆ ಕೊಡಲು ಆಗದಿದ್ದರೆ ಇವರು ಎಂತಹ ಜಿಲ್ಲಾಧಿಕಾರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.