ADVERTISEMENT

ಹುಳಿಯಾರು | ಶೌಚಾಲಯ ಇಲ್ಲಿ ಶೋಚನೀಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:26 IST
Last Updated 11 ಆಗಸ್ಟ್ 2025, 2:26 IST

ಹುಳಿಯಾರು ಬಸ್‌ ನಿಲ್ದಾಣದಲ್ಲಿ ಕುಂಟುತ್ತಾ ಸಾಗಿರುವ ಶೌಚಾಲಯ ಕಟ್ಟಡ ಕಾಮಗಾರಿ

ಹುಳಿಯಾರು ಬಸ್‌ ನಿಲ್ದಾಣದಲ್ಲಿ ಕುಂಟುತ್ತಾ ಸಾಗಿರುವ ಶೌಚಾಲಯ ಕಟ್ಟಡ ಕಾಮಗಾರಿ

ಹುಳಿಯಾರು: ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಸೌಕರ್ಯ ದೊರೆಯುತ್ತಿಲ್ಲ. ಪಟ್ಟಣದ ಬಸ್‌ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲದೆ ಜನರು ಪರದಾಡುವಂತಾಗಿದೆ.

ADVERTISEMENT

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಮೇಲೆ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ರಸ್ತೆಗಳ ಕರಿದಾಗಿವೆ. ಬೆಂಗಳೂರು ಸೇರಿದಂತೆ ಸುಮಾರು ನಾಲ್ಕು ಜಿಲ್ಲೆಗಳು ಸಂದಿಸುವ ಕೇಂದ್ರ ಬಿಂದುವಾಗಿರುವುದರಿಂದ ಜನಸಂಪರ್ಕ ಹೆಚ್ಚಾಗಿದೆ. ನಾಲ್ಕು ಅಂತಸ್ತಿನ ಕಟ್ಟಡಗಳು ತಲೆ ಎತ್ತಿ ಪಟ್ಟಣ ಹಿಗ್ಗುತ್ತಿರುವ ನಡುವೆ ಮೂಲ ಸೌಕರ್ಯಗಳು ಲಭ್ಯವಾಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ.

ಮೂಲ ಸೌಕರ್ಯ ಕಲ್ಪಿಸಬೇಕಾದ ಸ್ಥಳೀಯ ಪಟ್ಟಣ ಪಂಚಾಯಿತಿ ಸ್ಪಂದಿಸುತ್ತಿಲ್ಲ ಎಂಬ ದೂರು ಇದೆ. ಪಟ್ಟಣದಲ್ಲಿ ಬಸ್‌ ನಿಲ್ದಾಣ, ರಾಮಗೋಪಾಲ್‌ ವೃತ್ತ, ಸಂತೆ ಮೈದಾನ, ಎಪಿಎಂಸಿ ಮಾರುಕಟ್ಟೆ, ಸರ್ಕಾರಿ ಕಚೇರಿ, ಬ್ಯಾಂಕ್‌ ಸೇರಿದಂತೆ ವಾಣಿಜ್ಯ ಮಳಿಗೆಗಳಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲದೆ ಜನರು ದಾರಿ ಪಕ್ಕದ ಖಾಲಿ ನಿವೇಶನ, ಗೋಡೆ ಮರೆಯನ್ನು ಆಶ್ರಯಿಸಬೇಕಾಗಿದೆ.

ಬಸ್‌ ನಿಲ್ದಾಣದಲ್ಲಿ ಬಹು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯ ಸಂಪೂರ್ಣ ಶಿಥಿಲಗೊಂಡಿದೆ. ಬಸ್‌ ಇಳಿದವರು ಶೌಚಕ್ಕೆ ಓಡಿದವರು ಕಟ್ಟಡದೊಳಗೆ ಬಗ್ಗಿ ನೋಡಿ ಹೆದರಿ ಬರುತ್ತಾರೆ. ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಮಹಿಳೆಯರ ಶೌಚಾಲಯವಂತೂ ಮೂಗು ತೂರಿಸದಷ್ಟು ವಾಸನೆ ಹರಡುತ್ತಿದೆ. ಕಟ್ಟಡದ ಹೀನಾಯ ಸ್ಥಿತಿ ಕಂಡ ಪುರುಷರು ಬಸ್‌ ನಿಲ್ದಾಣ ಪಕ್ಕದ ಕೆರೆ ಆಶ್ರಯಿಸುತ್ತಾರೆ. ಆದರೆ ಮಹಿಳೆಯರಿಗೆ ಅದೇ ಕಟ್ಟಡದೊಳಗೆ ಹೋಗುವ ಅನಿವಾರ್ಯವಿದೆ.

ರಾಮಗೋಪಾಲ್‌ ವೃತ್ತ ಜನಸಂದಣಿಯ ಪ್ರದೇಶವಾಗಿದ್ದರೂ ಅಲ್ಲಿ ಶೌಚಕ್ಕೆ ತೊಂದರೆ ಅನುಭವಿಸುವಂತಾಗಿದೆ. ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯವಿದ್ದರೂ ಅವು ಸಿಬ್ಬಂದಿ ಉಪಯೋಗಕ್ಕೆ ಮಾತ್ರ. ಪಟ್ಟಣದಲ್ಲಿ ನಾಲ್ಕು ಅಂತಸ್ತಿನ ವಾಣಿಜ್ಯ ಮಳಿಗೆ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಸದ್ಯಕ್ಕೆ ಪಟ್ಟಣಕ್ಕೆ ಬಂದು ಹೋಗುವ ನಾಗರಿಕರು ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುತ್ತಲೇ ಇದ್ದಾರೆ.

ಕುಂಟುತ್ತಾ ಸಾಗಿದ ಕಾಮಗಾರಿ: ಪಟ್ಟಣದ ಬಸ್‌ ನಿಲ್ದಾಣ ಮತ್ತು ರಾಮಗೋಪಾಲ್‌ ವೃತ್ತದಲ್ಲಿ ಶೌಚಾಲಯ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿ ಹರಾಜು ನಡೆಸಿ ವರ್ಷಗಳೇ ಸವೆದಿವೆ. ಆದರೆ ಇನ್ನೂ ಕಾರ್ಯಾರಂಭಗೊಂಡಿಲ್ಲ. ವರ್ಷದಿಂದ ಕಾಮಗಾರಿ ನಡೆದು ಈಗ ಪೂರ್ಣಗೊಳ್ಳುವ ಹಂತ ತಲುಪಿದೆ. ಉದ್ಘಾಟನೆಗೆ ಜನರು ಇನ್ನೆಷ್ಟು ದಿನ ಕಾಯಬೇಕು ಎಂಬುದನ್ನು ಸ್ಥಳೀಯ ಆಡಳಿತವೇ ನಿರ್ಧರಿಸಬೇಕಿದೆ.

ಮಹಿಳೆಯರ ಪರದಾಟ

ಪಟ್ಟಣದ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಇಲ್ಲದೆ ಮಹಿಳೆಯರು ಪರದಾಡುತ್ತಾರೆ. ನಿಲ್ದಾಣದ ಅಂಗಡಿಯವರನ್ನು ಶೌಚಾಲಯ ಎಲ್ಲಿದೆ ಎಂದು ಕೇಳುತ್ತಾರೆ. ಇತ್ತೀಚೆಗೆ  ಗರ್ಭಿಣಿಯೊಬ್ಬರು ಬಸ್‌ ಇಳಿದು ಶೌಚಕ್ಕೆ ಹೋಗಲು ಪರದಾಡುತ್ತಿದ್ದರು. ಅವರ ಸ್ಥಿತಿ ನೋಡಿ ನಾನೇ ಹತ್ತಿರದ ಮನೆಯವರನ್ನು ಒಪ್ಪಿಸಿ ಅವರ ಕಷ್ಟ ತಪ್ಪಿಸಿದೆ. ಪ್ರತಿದಿನವೂ ಇಂತಹ ಸಮಸ್ಯೆ ಇದ್ದೇ ಇರುತ್ತದೆ.

-ಎಚ್.ಎನ್.ಸತೀಶ್‌, ಪಾತ್ರೆ ಅಂಗಡಿ, ಬಸ್‌ ನಿಲ್ದಾಣ, ಹುಳಿಯಾರು

ಕೆರೆಯೇ ಶೌಚಾಲಯ

ಹುಳಿಯಾರು ಬಸ್‌ ನಿಲ್ದಾಣದಲ್ಲಿ ಕೆರೆಯೇ ಶೌಚಾಲಯವಾಗಿದೆ. ಬಸ್‌ ಇಳಿದವರು ಮಲ, ಮೂತ್ರ ವಿಸರ್ಜನೆಗೆ ಕೆರೆಗೆ ತೆರಳುತ್ತಾರೆ. ಕೆರೆಯಲ್ಲಿ ಬೇಲಿ ಬೆಳೆದಿದ್ದು ಒಮ್ಮೊಮ್ಮೆ ವಿಷ ಜಂತುಗಳು ಕಾಣಿಸಿಕೊಂಡಿವೆ.

ಸೀಗೆಬಾಗಿ ವರದರಾಜು, ಬಸ್‌ ಏಜಂಟ್

ಎರಡು ಕಡೆ ನಿರ್ಮಾಣ

ಪಟ್ಟಣದಲ್ಲಿ ಈಗಾಗಲೇ ಎರಡು ಕಡೆ ಶೌಚಾಲಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಸದ್ಯದಲ್ಲಿಯೇ ಕಾರ್ಯಾರಂಭಗೊಳ್ಳಲಿದೆ. ಉಳಿದಂತೆ ಕೆಲಕಡೆ ಬ್ಯಾಂಕ್‌ಗಳಲ್ಲಿ ಸಾರ್ವಜನಿಕರಿಗೆ ಶೌಚಾಲಯ ಬಳಕೆ ಮಾಡಲು ಸಿಬ್ಬಂದಿ ಬಿಡುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಆ ಬಗ್ಗೆ ಅರಿವು ಮೂಡಿಸಬೇಕಿದೆ.

ರಾಜು ಬಡಗಿ, ಪಟ್ಟಣ ಪಂಚಾಯಿತಿ ಸದಸ್ಯ

ಮೂಲಸೌಕರ್ಯ ಇಲ್ಲ

ಹುಳಿಯಾರು ತಾಲ್ಲೂಕು ಕೇಂದ್ರಕ್ಕೆ ಸಮಾನವಾಗಿ ಬೆಳೆಯುತ್ತಿದೆ. ಅಲ್ಲದೆ ಪ್ರಮುಖ ವ್ಯಾಪಾರ ಕೇಂದ್ರವಾಗಿರುವುದರಿಂದ ವಾಣಿಜ್ಯ ವಹಿವಾಟು ನಡೆಸಲು ಬೇರೆ ಕಡೆಯಿಂದ ಬರುತ್ತಾರೆ. ಅವರಿಗೆ ಕನಿಷ್ಟ ಪಕ್ಷ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಇದ್ದರೆ ಅನುಕೂಲ.

-ಎಚ್‌.ಸಿ.ಸುರೇಶ್‌, ಶೇಖರ್‌ ಗ್ರಾಫಿಕ್ಸ್‌, ಹುಳಿಯಾರು

ಸೌಕರ್ಯ ಕಲ್ಪಿಸಿ

ಸ್ಥಳೀಯ ಆಡಳಿತ ಸಾರ್ವಜನಿಕರಿಂದ ತೆರಿಗೆ ಪಡೆದ ಮೇಲೆ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿಯಾಗಿದೆ. ಹುಳಿಯಾರು ಬೆಳೆಯುತ್ತಿರುವ ಪಟ್ಟಣವಾಗಿದ್ದು ಸೌಲಭ್ಯ ಹೆಚ್ಚಿಸಬೇಕು.

-ಗೋವಿಂದರಾಜು, ಯಗಚಿ ಟ್ರೇಡರ್ಸ್‌

ಮಹಿಳೆಯರ ಶೌಚಕ್ಕೆ ನೆರವು

ಬಸ್‌ ನಿಲ್ದಾಣದಲ್ಲಿ ಮಹಿಳೆಯರು ಶೌಚಕ್ಕೆ ಪರದಾಡುತ್ತಾರೆ. ಬಹಳಷ್ಟು ಬಾರಿ ನರಳಾಟ ನೋಡಿ ನಾನೇ ನಮ್ಮ ಮನೆಗೆ ಕರೆದೊಯ್ದು ಅವರ ಸಮಸ್ಯೆ ಬಗೆಹರಿಸಿದ್ದೇನೆ.  ಬಾಣಂತಿ, ಗರ್ಭಿಣಿ ಹಾಗೂ ಹುಷಾರಿಲ್ಲದ ಮಹಿಳೆಯರ ಪರದಾಟ ನೋಡಲಾಗುತ್ತಿಲ್ಲ.

-ವರಮಹಾಲಕ್ಷ್ಮಿ, ಹೂವಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.