ತುಮಕೂರು: ನಗರ ಹೊರವಲಯದ ತಿಮ್ಮರಾಜನಹಳ್ಳಿ ಹತ್ತಿರ ಸುಮಾರು 200 ಎಕರೆಯಲ್ಲಿ ಗೋದಾಮು ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಭಾನುವಾರ ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ರೈಲ್ವೆ ಇಲಾಖೆಯಿಂದ ಗೋದಾಮು ನಿರ್ಮಾಣವಾಗಲಿದೆ. ರಸಗೊಬ್ಬರ, ಸಿಮೆಂಟ್ ಸೇರಿದಂತೆ ಇತರೆ ಸಾಮಗ್ರಿ ಸಂಗ್ರಹಕ್ಕೆ ಬಳಕೆಯಾಗಲಿದೆ. ವಿಮಾನ ನಿಲ್ದಾಣಕ್ಕಿಂತ ವಿಭಿನ್ನವಾಗಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ರೈಲ್ವೆ ಅಭಿವೃದ್ಧಿ ಕೆಲಸ ಆಗುತ್ತಿದೆ. ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗೆ ವೇಗ ನೀಡಲಾಗಿದೆ ಎಂದರು.
ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್, ‘ತುಮಕೂರು- ಬೆಂಗಳೂರು ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಿಸಬೇಕು. ತುಮಕೂರು– ಯಶವಂತಪುರ ಮೆಮು ರೈಲನ್ನು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣದ ವರೆಗೂ ವಿಸ್ತರಿಸಬೇಕು. ಜಿಲ್ಲೆಯಲ್ಲಿ ರೈಲ್ವೆ ಪ್ರಯಾಣಿಕರು ಹೆಚ್ಚಿದ್ದು, ರೈಲುಗಳ ಸಂಖ್ಯೆ ಜಾಸ್ತಿ ಮಾಡಬೇಕು’ ಎಂದು ಮನವಿ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಎಚ್.ಜಿ.ಚಂದ್ರಶೇಖರ್, ವೈ.ಎಚ್.ಹುಚ್ಚಯ್ಯ, ಎಸ್.ಶಿವಪ್ರಸಾದ್, ನಾಗರಾಜು, ಆರ್.ಬಾಲಾಜಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.