ADVERTISEMENT

ವರುಣನ ಸಿಂಚನ; ಗರಿಗೆದರಿದ ಕೃಷಿ ಚಟುವಟಿಕೆ

ಹೊನ್ನಾರು ಪೂಜೆ ಮೂಲಕ ಚಾಲನೆ ನೀಡಿದ ರೈತರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 15:51 IST
Last Updated 7 ಏಪ್ರಿಲ್ 2020, 15:51 IST
ಹೊಯ್ಸಳಕಟ್ಟೆ ಗ್ರಾಮದಲ್ಲಿ ಮಂಗಳವಾರ ರೈತರು ಹೊನ್ನಾರು ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆಗೆ ಚಾಲನೆ ನೀಡಿದರು
ಹೊಯ್ಸಳಕಟ್ಟೆ ಗ್ರಾಮದಲ್ಲಿ ಮಂಗಳವಾರ ರೈತರು ಹೊನ್ನಾರು ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆಗೆ ಚಾಲನೆ ನೀಡಿದರು   

ಹುಳಿಯಾರು: ಹೋಬಳಿ ವ್ಯಾಪ್ತಿಯ ಕೆಲ ಕಡೆ ವರುಣನ ಸಿಂಚನವಾಗಿದ್ದು, ರೈತರು ಹೊನ್ನಾರು ಪೂಜೆ ಸಲ್ಲಿಸುವ ಮೂಲಕ ಪ್ರಸಕ್ತ ವರ್ಷದ ಕೃಷಿ ಚಟುವಟಿಕೆಗಳಿಗೆ ಮಂಗಳವಾರ ಚಾಲನೆ ನೀಡಿದ್ದಾರೆ.

ಸಾಂಪ್ರದಾಯದಂತೆ ಯುಗಾದಿ ಹಬ್ಬದ ತರುವಾಯ ಹೊಸ ವರ್ಷ ಆರಂಭವಾಗುತ್ತದೆ. ಈ ಬಾರಿ ಯುಗಾದಿ ಮುಗಿದು ಎರಡು ವಾರಗಳಲ್ಲಿ ಅಲ್ಲಲ್ಲಿ ಮಳೆಯ ಸಿಂಚನವಾಗುತ್ತಿದೆ. ಸೋಮವಾರ ರಾತ್ರಿ ಹೋಬಳಿ ವ್ಯಾಪ್ತಿಯ ಹಲವು ಕಡೆ ಸೋನೆ ಮಳೆಯ ಸಿಂಚನವಾಗಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿ ಸ್ವಲ್ಪ ಹದ ಮಳೆಯಾಗಿದೆ. ಕೆಲ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಯ ಮೊದಲ ಭಾಗವಾಗಿ ಹೊನ್ನಾರು (ಎತ್ತು ಹಾಗೂ ನೇಗಿಲುಗಳಿಗೆ ಹೊಲದಲ್ಲಿ ಪೂಜೆ) ಹೂಡಿದ್ದಾರೆ.

ADVERTISEMENT

ಅಶ್ವಿನಿ ಮಳೆ ವರ್ಷದ ಮೊದಲ ಮಳೆಯಾಗಿದ್ದು, ಇದೇ ಏ. 13ರಂದು ಆರಂಭಗೊಳ್ಳುತ್ತದೆ. ಆದರೆ, ಹಳೆಯ ಮಳೆ ರೇವತಿ ಈ ಬಾರಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿ ರೈತರಲ್ಲಿ ಉತ್ಸಾಹ ಮೂಡಿಸಿದೆ.

ಯುಗಾದಿ ಹಬ್ಬದ ನಂತರ ಮಳೆ ಬಂದಿರುವುದು ಅಕಾಲಿಕ ಮಳೆಯಾಗಿರದೆ ಕೃಷಿಗೆ ಪೂರಕವಾಗಿದೆ. ಮುಂದಿನ ಹೊಸ ಮಳೆ ಆರಂಭದಲ್ಲಿ ಬಂದರೆ ಹೆಸರು ಬಿತ್ತನೆ ಮಾಡಲು ಅನುಕೂಲವಾಗುತ್ತದೆ ಎಂದು ಹೊಯ್ಸಳಕಟ್ಟೆ ಗ್ರಾಮದ ರಂಗನಾಥಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.