ಕೊಡಿಗೇನಹಳ್ಳಿ: ಈ ವರ್ಷ ಸಕಾಲಕ್ಕೆ ಮಳೆ ಬೀಳದಿರುವುದರಿಂದ ಮುಂಗಾರಿನಲ್ಲಿ ಬಿತ್ತಿದ್ದ ಮೆಕ್ಕೆಜೋಳ, ಶೇಂಗಾ ಹಾಗೂ ರಾಗಿ ಪೈರು ಸರಿಯಾಗಿ ಬೆಳವಣಿಗೆಯಾಗದ ಪರಿಣಾಮ ಇಳುವರಿ ಕುಂಠಿತ ಹಾಗೂ ಮೇವಿಗೂ ಬರ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಯಲುಸೀಮೆಯ ಮಳೆಯಾಶ್ರಿತ ಭಾಗದಲ್ಲಿ ಇಲ್ಲಿನ ರೈತರು ಹಲವು ವರ್ಷಗಳಿಂದ ಮೆಕ್ಕೆಜೋಳ, ಶೇಂಗಾ, ರಾಗಿ ಜೊತೆಗೆ ತೊಗರಿ, ಅಲಸಂದಿ, ಅವರೆ ಮತ್ತು ಕೆಲ ಸ್ಥಳಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ನೀರಾವರಿ ಸೌಕರ್ಯವಿಲ್ಲದ ಕಾರಣ ಇಲ್ಲಿನ ರೈತರು ಮುಂಗಾರಿನಲ್ಲಿ ಮಳೆಗೆ ಅವಲಂಬಿತರಾಗಿರುವುದರಿಂದ ಒಂದು ವರ್ಷ ಮಳೆ ಚನ್ನಾಗಿ ಬಿದ್ದರೆ, ಇನ್ನೆರಡು ವರ್ಷ ಮಳೆ ಇರುವುದಿಲ್ಲ.
ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದರಿಂದ ರೈತರ ಸಾಲ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಆದರೆ ಬಿತ್ತನೆ ಮಾಡಿದ್ದ ಸಂದರ್ಭದಲ್ಲಿ ಮಾತ್ರ ನಿರಂತರವಾಗಿ ನಾಲ್ಕೈದು ದಿನ ಜೋರಾಗಿ ಸುರಿದಿದ್ದು ಬಿಟ್ಟರೆ ಮತ್ತೆ ಸಕಾಲಕ್ಕೆ ಜೋರಾದ ಮಳೆ ಬೀಳದಿರುವುದು ಬೆಳೆ ಕುಂಠಿತಕ್ಕೆ ಕಾರಣವಾಗಿದೆ. ಮೆಕ್ಕೆಜೋಳದ ಹೊಲಕ್ಕೆ ಕಳೆ ತೆಗಿಸಿದ ನಂತರ ಮೂಟೆಗಟ್ಟಲೇ ರಸಗೊಬ್ಬರ ಹಾಕಿದ್ದರು ಕೂಡ ಸಕಾಲಕ್ಕೆ ಉತ್ತಮ ಮಳೆ ಬಾರದಿದ್ದರಿಂದ ಎರಡು ಅಡಿಯಿಂದ ಮೂರು ಅಡಿ ಮಾತ್ರ ಪೈರು ಬೆಳೆದು ಸೂಲಂಗಿ ಬಿಟ್ಟಿದೆ. ಇನ್ನು ಇದು ತೆನೆ ಬಿಟ್ಟು ಇಳುವರಿ ಹೇಗೆ ಬರುತ್ತದೆ ಎನ್ನುವುದು ರೈತರ ಲೆಕ್ಕಚಾರ.
ಕೃಷಿಯನ್ನೇ ನಂಬಿರುವವರಿಗೆ ಈ ವರ್ಷ ಹೇಗೂ ಉತ್ತಮ ಮಳೆಯಾಗದೆ. ಬೆಳೆ ನಷ್ಟವಾಗಿ ಹಾಕಿರುವ ಬಂಡವಾಳವು ವಾಪಸ್ ಬರದಂತಾಗಿದೆ. ಇಲ್ಲಿನ ಜನರಿಗೆ ಬದುಕಲು ಕೃಷಿ ಬಿಟ್ಟು ಅನ್ಯ ಮಾರ್ಗಗಳಿಲ್ಲ. ಸರ್ಕಾರ ತುರ್ತು ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
‘ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ನಾಲ್ಕು ಎಕರೆಗೆ ಮೆಕ್ಕೆಜೋಳದ ಜೊತೆಗೆ ಅವರೆ ಮತ್ತು ಅಲಸಂದಿ ಕೂಡ ಹಾಕಿದ್ದೆ. ಆದರೆ ಸಕಾಲಕ್ಕೆ ಮಳೆಯಾಗದೆ ಇರುವುದರಿಂದ ಬೆಳೆ ಬೆಳವಣಿಗೆಯಿಲ್ಲದೆ ಸೊರಗುತ್ತಿದೆ. ಇದರಿಂದ ಇಳುವರಿ ಜೊತೆಗೆ ಮೇವು ದೊರಕುವುದು ಕಷ್ಟ’ ಎನ್ನುತ್ತಾರೆ ರೈತ ಹುನುಮಂತರಾಯಪ್ಪ ಗುಟ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.