ADVERTISEMENT

ಚಿಕ್ಕನಾಯಕನಹಳ್ಳಿ: ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 7:41 IST
Last Updated 9 ಅಕ್ಟೋಬರ್ 2021, 7:41 IST
ಗುರುವಾರ ರಾತ್ರಿ ಬಿದ್ದ ಮಳೆಗೆ ಅಂಕಸಂದ್ರ ಗೊಲ್ಲರಹಟ್ಟಿ ಗ್ರಾಮದ ಬಳಿ ಮನೆಗೆ ನೀರು ನುಗ್ಗಿ ಬಾಗಿಲ ಮೂಲಕ ಹರಿಯಿತು
ಗುರುವಾರ ರಾತ್ರಿ ಬಿದ್ದ ಮಳೆಗೆ ಅಂಕಸಂದ್ರ ಗೊಲ್ಲರಹಟ್ಟಿ ಗ್ರಾಮದ ಬಳಿ ಮನೆಗೆ ನೀರು ನುಗ್ಗಿ ಬಾಗಿಲ ಮೂಲಕ ಹರಿಯಿತು   

ಚಿಕ್ಕನಾಯಕನಹಳ್ಳಿ: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರ ಜೊತೆಗೆ ತಾಲ್ಲೂಕಿಗೆ ಹರಿಯುತ್ತಿರುವ ಹೇಮಾವತಿ ನೀರಿನಿಂದಾಗಿ ಕೆಲವು ಕೆರೆ- ಕಟ್ಟೆಗಳಿಗೆ ನೀರು ಬಂದಿದೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹೇಮಾವತಿ ನದಿಯಿಂದ ತಾಲ್ಲೂಕಿನ 26 ಕೆರೆಗಳಿಗೆ ನೀರು ಹರಿಸುವ ಯೋಜನೆ ಸಫಲವಾಗಿದೆ. ಕಳೆದ ವರ್ಷ ಮಳೆಗಾಲದ ಕೊನೆಯಲ್ಲಿ ನೀರು ಹರಿದಿತ್ತಾದರೂ ಕೆಲವು ಕೆರೆಗಳಿಗೆ ಮಾತ್ರ ನೀರು ಹರಿದು ಬೇಸಿಗೆಯಲ್ಲಿ ಬತ್ತಿ ಹೋಗಿತ್ತು. ಈ ಬಾರಿ ಮಳೆಗಾಲದ ಆರಂಭದಲ್ಲಿಯೇ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಹೇಮಾವತಿ ಕಾಲವೆಗೆ ನೀರು ಬಿಡಲಾಯಿತು. ಇದರಿಂದ ಶೆಟ್ಟಿಕೆರೆ, ಸಾಸಲು ಕೆರೆಗಳು ಕೋಡಿ ಹರಿದು ನೀರು ಮುಂದೆ ಹರಿಯುತ್ತಿದೆ.

ಬರಗೂರು, ಅಂಕಸಂದ್ರ, ಗೂಬೇಹಳ್ಳಿ ಹಳ್ಳಗಳ ಮೂಲಕ ಹುಳಿಯಾರು ಹೋಬಳಿಯ ಜೋಡಿ ತಿರುಮಲಾಪುರದ ಕೆರೆಗೆ ನೀರು ಹರಿದು ಬರುತ್ತಿದೆ. ಹೇಮಾವತಿ ನೀರು ತಿರುಮಲಾಪುರ ಕೆರೆಗೆ ತಲುಪಿರುವ ಸಂತೋಷ ಒಂದೆಡೆಯಾದರೆ, ಇತ್ತೀಚೆಗೆ ಈ ಭಾಗದಲ್ಲಿ ಉತ್ತಮ ಮಳೆಯಾಗಿರುವುದು ನೀರಿನ ಹರಿವು ಹೆಚ್ಚಾಗಲು ಕಾರಣ ಎನ್ನುತ್ತಾರೆ ಹಂದನಕೆರೆ ಹೋಬಳಿಯ ನಿರುವಗಲ್ ಗೊಲ್ಲರಹಟ್ಟಿಯ ನಿವಾಸಿ ಚನ್ನಪ್ಪ.

ADVERTISEMENT

ಕೆರೆ ಪಾತ್ರಗಳಿಗೆ ನೀರು ಬರುತ್ತಿರುವುದರಿಂದ ಕೊಳವೆ ಬಾವಿಗಳು ತುಂಬಿ ಹರಿಯುತ್ತಿವೆ. ಬತ್ತಿದ್ದ ಕೆಲ ಕೊಳವೆ ಬಾವಿಗಳಲ್ಲಿ ನೀರು ಕಾಣಿಸಿಕೊಂಡಿದೆ.

ಮಳೆಯಿಂದ ಪರದಾಟ: ತಾಲ್ಲೂಕು ವ್ಯಾಪ್ತಿಯಲ್ಲಿ ಆಗುತ್ತಿರುವ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಗುರುವಾರ ತಡರಾತ್ರಿ ಸುರಿದ ಮಳೆಗೆ ಅಂಕಸಂದ್ರ ಗೊಲ್ಲರಹಟ್ಟಿಯ ತೋಟದ ಮನೆಗೆ ನೀರು ನುಗ್ಗಿತ್ತು. ಮಾಳಿಗೆಹಳ್ಳಿ ಗ್ರಾಮದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.