ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆಯ ಎಂ.ವಿ.ಪ್ರಕಾಶ್ ನೇಯ್ದ ‘ರೈನ್‍ಬೊ ಕಲಾಂಜಲಿ’ ರೇಷ್ಮೆ ಸೀರೆಗೆ ರಾಜ್ಯ ಸರ್ಕಾರ ರಾಜ್ಯಮಟ್ಟದ ಪ್ರಥಮ ಬಹುಮಾನ ಘೋಷಿಸಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಹಲವು ದಶಕಗಳಿಂದ ಉತ್ತಮ ಗುಣಮಟ್ಟದ ಕೈಮಗ್ಗ ರೇಷ್ಮೆ ಸೀರೆಗಳಿಗೆ ವೈ.ಎನ್.ಹೊಸಕೋಟೆ ಹೆಸರುವಾಸಿ. ಇಲ್ಲಿನ ನೇಕಾರ ಎಂ.ವಿ.ಪ್ರಕಾಶ್ ಆಕರ್ಷಕ ರೇಷ್ಮೆ ಸೀರೆ ನೇಯುವ ಮೂಲಕ 2024-25ನೇ ಸಾಲಿನ ರಾಜ್ಯಮಟ್ಟದ ಉತ್ತಮ ನೇಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರತಿವರ್ಷ ರಾಜ್ಯಮಟ್ಟದಲ್ಲಿ ಉತ್ತಮ ನೇಕಾರರನ್ನು ಗುರ್ತಿಸಿ ಪ್ರಶಸ್ತಿ ನೀಡುತ್ತಿದೆ. ಆಗಸ್ಟ್ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪತ್ರ, ಫಲಕ ಮತ್ತು 25 ಸಾವಿರ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಹಾಗೂ ತಿಂಗಳಿಗೆ ₹8 ಸಾವಿರದಂತೆ ವಾರ್ಷಿಕ ₹96 ಸಾವಿರ ಮಾಸಾಶನವನ್ನು ಪ್ರಶಸ್ತಿ ವಿಜೇತರಿಗೆ ಜೀವಿತಾವಧಿಯವರೆಗೆ ನೀಡಲಾಗುತ್ತದೆ.
ಈ ಸೀರೆ ನೇಯಲು ಎರಡು ತಿಂಗಳು ಬೇಕಾಗುತ್ತದೆ. ಜೊತೆಗೆ 21 ಲಾಳಿಗಳ ಪೈಕಿ ಒಂದರಲ್ಲಿ ಬೆಳ್ಳಿ ಜರಿ, ಮತ್ತೊಂದರಲ್ಲಿ ಒನ್ ಗ್ರಾಂ ಗೋಲ್ಡ್ ಜರಿ ಸೇರಿದಂತೆ ವಿವಿಧ ಬಣ್ಣಗಳ ರೇಷ್ಮೆ ನೂಲು ಇರುತ್ತದೆ. ಸುಂದರವಾದ ಬಳ್ಳಿ, ರೈನ್ ಬೋ ಬಣ್ಣ, ಆನೆ, ನವಿಲುಗಳಿಂದ ಕೂಡಿ ಚಿತ್ತಾಕರ್ಷಕವಾಗಿ ಸೀರೆ ಮೂಡಿ ಬಂದಿದೆ.
ಪ್ರಕಾಶ್ ನೇಯ್ದ ರೇಷ್ಮೆ ಸೀರೆ 6.30 ಮೀಟರ್ ಉದ್ದ, 49 ಇಂಚು ಅಗಲವಿದ್ದು, 850 ಗ್ರಾಂ ತೂಕವಿದೆ. ಈ ಸೀರೆಯ ಬೆಲೆ ₹85 ಸಾವಿರ ಎಂದು ಅಂದಾಜಿಸಲಾಗಿದೆ. 2023ನೇ ಸಾಲಿನಲ್ಲಿ ಗ್ರಾಮದ ಎಂ.ಜಯಕೀರ್ತಿ ಅವರು ನೇಕಾರಿಕೆ ಮಾಡಿದ್ದ ‘ರೈಸಿಂಗ್ ಬ್ರೊಕೆಟ್’ ಸೀರೆಗೆ ಪ್ರಥಮ ಬಹುಮಾನದೊಂದಿಗೆ ರಾಜ್ಯಮಟ್ಟದ ಬಹುಮಾನ ಪಡೆದಿದ್ದರು.
ಗುಣಮಟ್ಟ, ವಿನ್ಯಾಸದಿಂದಾಗಿ ರಾಜ್ಯಮಟ್ಟದಲ್ಲಿ ಇಲ್ಲಿನ ಸೀರೆಗೆಳು ಜನಪ್ರಿಯತೆ ಗಳಿಸಿದ್ದರೂ ಸ್ಥಳೀಯ ಬ್ರಾಂಡ್, ಮಾರುಕಟ್ಟೆ ಇಲ್ಲದಿರುವುದರ ಬಗ್ಗೆ ನೇಕಾರರಿಗೆ ಬೇಸರವಿದೆ. ಇಲ್ಲಿನ ಸೀರೆಗಳು ರಾಷ್ಟ್ರದ ಧರ್ಮವರಂ, ಮುದ್ದರೆಡ್ಡಿಪಲ್ಲಿ, ಕಾಂಚಿವರಂ, ಇತ್ಯಾದಿ ಬ್ರಾಂಡ್‌ಗಳ ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಬ್ರಾಂಡ್ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಲ್ಲಿ ಸ್ಥಳೀಯ ನೇಕಾರರ ಜೀವನ ಸುಧಾರಣೆಯಾಗಲಿದೆ. ಗ್ರಾಮ, ತಾಲ್ಲೂಕು, ಜಿಲ್ಲೆಯ ಹೆಸರು ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆಯಲಿದೆ ಎನ್ನುವುದು ನೇಕಾರರ ಆಶಯ.ವೈ.ಎನ್.ಹೊಸಕೋಟೆ ಅಪ್ಪಟ ಕೈಮಗ್ಗ ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ ಪಡೆದಿದೆ. ಆದರೆ ಇಲ್ಲಿನ ಸೀರೆಗಳಿಗೆ ಬ್ರಾಂಡ್ ಇಲ್ಲ. ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಇತ್ತೀಚೆಗೆ ಕೈಮಗ್ಗ ನೇಕಾರಿಕೆ ಕಡಿಮೆಯಾಗುತ್ತಿದ್ದು ಸರ್ಕಾರದ ಪ್ರೋತ್ಸಾಹ ಅಗತ್ಯ. ಜಿ.ಬಿ.ಸತ್ಯನಾರಾಯಣ ನೇಕಾರ
ಈ ಸೀರೆ ನೇಯಲು 60 ದಿನ ಶ್ರಮಿಸಿದ್ದೇನೆ. 21 ಲಾಳಿಗಳಲ್ಲಿ ಕೈಯಿಂದ ಪ್ರತಿಯೊಂದು ಎಳೆಯನ್ನು ಕುಟ್ಟಿ ತಿರುವಿ ತೆಗೆದು ನೇಯುವುದರಿಂದ ಬಹಳ ಸಮಯ ಮತ್ತು ಶ್ರಮ ತೆಗೆದುಕೊಳ್ಳುತ್ತದೆ.ಎಂ.ವಿ.ಪ್ರಕಾಶ ವೈ.ಎನ್.ಹೊಸಕೋಟೆ
ವೈ.ಎನ್.ಹೊಸಕೋಟೆ ಅಪ್ಪಟ ಕೈಮಗ್ಗ ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ ಪಡೆದಿದೆ. ಆದರೆ ಇಲ್ಲಿನ ಸೀರೆಗಳಿಗೆ ಬ್ರಾಂಡ್ ಇಲ್ಲ. ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಇತ್ತೀಚೆಗೆ ಕೈಮಗ್ಗ ನೇಕಾರಿಕೆ ಕಡಿಮೆಯಾಗುತ್ತಿದ್ದು ಸರ್ಕಾರದ ಪ್ರೋತ್ಸಾಹ ಅಗತ್ಯ.ಜಿ.ಬಿ.ಸತ್ಯನಾರಾಯಣ ನೇಕಾರ
ಹಲವು ವರ್ಷಗಳಿಂದ ಕೈಮಗ್ಗದ ರೇಷ್ಮೆ ಸೀರೆ ನೇಯುತ್ತಿದ್ದೇವೆ. ವಿಶೇಷವಾದ ಸೀರೆ ಉತ್ಪಾದನೆಯಾಗಬೇಕು ಎಂಬ ಆಸೆ ಇತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಲವು ತಿಂಗಳು ಶ್ರಮ ಹಾಕಿ ಈ ಸೀರೆ ನೇಯಿಸಿದ್ದೇನೆ.ಜೆ.ಗೋವರ್ಧನ್ ಡಿಸೈನರ್ ಮತ್ತು ಮಗ್ಗದ ಮಾಲಿಕ
ವೈ.ಎನ್.ಹೊಸಕೋಟೆ ನೇಕಾರರನ್ನು ಗುರ್ತಿಸಿ ರಾಜ್ಯ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ. ಅಳಿವಿನಂಚಿನಲ್ಲಿರುವ ಕೈಮಗ್ಗ ನೇಕಾರಿಕೆ ಪುನಶ್ಚೇತನಗೊಳಿಸಲು ಸರ್ಕಾರ ಹೆಚ್ಚಿನ ಪೋತ್ಸಾಹ ನೀಡಬೇಕು.ವಿಜಯ್.ಸಿ ಕಾರ್ಯದರ್ಶಿ ಅನ್ನಪೂರ್ಣೇಶ್ವರಿ ರೇಷ್ಮೆ ಕೈಮಗ್ಗ ನೇಕಾರರ ಸಹಕಾರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.