ADVERTISEMENT

ಮಧುಗಿರಿ | ರಾಮನ ಹೆಸರಿದ್ದರೆ ಕಾಂಗ್ರೆಸ್‌ಗೆ ಅಲರ್ಜಿ: ಶಾಸಕ ಸುರೇಶ್ ಗೌಡ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:34 IST
Last Updated 8 ಫೆಬ್ರುವರಿ 2026, 4:34 IST
ಮಧುಗಿರಿಯಲ್ಲಿ ಶನಿವಾರ ನಡೆದ ವಿಬಿ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮವನ್ನು ಶಾಸಕ ಬಿ.ಸುರೇಶ್‌ಗೌಡ ಉದ್ಘಾಟಿಸಿದರು
ಮಧುಗಿರಿಯಲ್ಲಿ ಶನಿವಾರ ನಡೆದ ವಿಬಿ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮವನ್ನು ಶಾಸಕ ಬಿ.ಸುರೇಶ್‌ಗೌಡ ಉದ್ಘಾಟಿಸಿದರು   

ಮಧುಗಿರಿ: ‘ಕಾಂಗ್ರೆಸ್‌ನವರಿಗೆ ರಾಮನ ಹೆಸರಿದ್ದರೆ ಅಲರ್ಜಿ. ಹಾಗಾಗಿ ವಿಬಿ ಜಿ ರಾಮ್ ಜಿ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸುತ್ತಾ ಹುಚ್ಚರಂತೆ ಹೋರಾಟ ಮಾಡುತ್ತಿದ್ದಾರೆ’ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ವಿಬಿ ಜಿ ರಾಮ್ ಜಿ ಯೋಜನೆ ಕುರಿತ ಜಾಗೃತಿ ಸಭೆಯಲ್ಲಿ ಮಾತನಾಡಿದರು.

‘ರಾಮನ ಹೆಸರಿದ್ದಕ್ಕೆ ಕಾಂಗ್ರೆಸ್‌ನವರಿಗೆ ಆಗುತ್ತಿಲ್ಲ. ರಾಮ ಎಂದರೆ ಪರಿಶ್ರಮ, ರಾಮ ಎಂದರೆ ಶ್ರಮ, ರಾಮ ಎಂದರೆ ಪ್ರಾಮಾಣಿಕ, ರಾಮ ಎಂದರೆ ನಾವು ನಂಬಿರುವ ದೇವರು. ಇಂತಹ ಅದರ್ಶ ಪುರುಷನ ಹೆಸರಿದ್ದರೆ ಇವರಿಗೇಕೆ ಹೊಟ್ಟೆ ಉರಿ. ಇವರು ಹಿಂದೆಲ್ಲ ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರನ್ನು ಹಲವಾರು ಯೋಜನೆಗೆ ಇಟ್ಟಿಲ್ಲವೆ’ ಎಂದರು.

ADVERTISEMENT

‘ರಾಜ್ಯದಲ್ಲಿ ದಿನೇ ದಿನೆ ಕಾಂಗ್ರೆಸ್ ಬಲಹೀನವಾಗುತ್ತಿದ್ದು ಮುಂದೆ ಜಿಲ್ಲೆಯಲ್ಲಿ ಜೆಡಿಎಸ್‌ ಜತೆಗೂಡಿ ಮೈತ್ರಿ ಅಭ್ಯರ್ಥಿಗಳನ್ನೇ ತುಮಕೂರು ಜಿಲ್ಲೆಯಲ್ಲಿ ಗೆಲ್ಲಿಸಿಕೊಳ್ಳುತ್ತೇವೆ. ಅದಕ್ಕಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸ್ಥಾನ ಪಡೆಯಲು ನಾವು ಶ್ರಮಿಸಬೇಕು. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ಜತೆಗೂಡಿ ರಾಜ್ಯದಲ್ಲಿ 150 ಸ್ಥಾನ ಪಡೆದು ಜನಪರ ಆಡಳಿತ ನೀಡುತ್ತೇವೆ’ ಎಂದರು.

ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಚಿದಾನಂದ ಎಂ.ಗೌಡ ಮಾತನಾಡಿ, ‘ಹಿಂದಿದ್ದ ನರೇಗಾ ಯೋಜನೆಯಲ್ಲಿ ರಾಜ್ಯ, ಸರ್ಕಾರ ಹಲವಾರು ಅಕ್ರಮ ಮಾಡಿತ್ತು. ಈ ಯೋಜನೆಯ ಹಣ ಬಡವರಿಗೆ ಕೃಷಿ ಕಾರ್ಮಿಕರಿಗೆ ತಲುಪದೇ ಗುತ್ತಿಗೆದಾರರ ಜೇಬಿಗೆ ಹೋಗುತ್ತಿತ್ತು. ಅಲ್ಲದೆ ಕೇಂದ್ರ ಶೇ 90ರಷ್ಟು ಹಣ ನೀಡುತ್ತಿದ್ದ ಕಾರಣ ನರೇಗಾ ಬಗ್ಗೆ ನಿರ್ಲಕ್ಷ್ಯವಹಿಸಿದ್ದರು. ಅದಕ್ಕಾಗಿ ಕೇಂದ್ರ ಬಿಜೆಪಿ ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಇರಲಿ ಎಂದು ಶೇ 60:40 ಅನುಪಾತದಲ್ಲಿ ಯೋಜನೆ ಜಾರಿಗೊಳಿಸಿದೆ’ ಎಂದರು.

ತಾಲ್ಲೂಕು ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ, ‘ಕೇಂದ್ರದ ಬಿಜೆಪಿ ಜನಪರವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಅವಸಾನದತ್ತ ಸಾಗುತ್ತಿದ್ದು, ಮಾಡಲು ಕೆಲಸವಿಲ್ಲದೆ ಈ ಯೋಜನೆಯಲ್ಲಿನ ಹೆಸರಿನ ಬಗ್ಗೆ ಅಪಸ್ವರ ಮಾಡುತ್ತಾ ಗೊಂದಲ ಮಾಡಲು ಹೊರಟಿದ್ದಾರೆ’ ಎಂದರು.

ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಪಾಂಡುರಂಗಾರೆಡ್ಡಿ ಮಾತನಾಡಿದರು. ಕಾರ್ಯದರ್ಶಿ ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಮೋಹನ್‌ರಾಜ್, ರಮೇಶ್, ಮಹಿಳಾಧ್ಯಕ್ಷೆ ಸ್ವರ್ಣಾಂಬಿಕಾ, ತಾಲ್ಲೂಕು ಮಂಡಲಾಧ್ಯಕ್ಷ, ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.