ಕುಣಿಗಲ್: ಬೆಟ್ಟದ ರಂಗನಾಥ ದೇವಾಲಯಕ್ಕೆ ಶ್ರಾವಣದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಸುಮಾರು ವರ್ಷಗಳಿಂದ ಅವ್ಯವಸ್ಥೆ ಜತೆಗೆ ವಿವಾದಿತ ಕೇಂದ್ರವಾಗಿರುವ ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕೆ ತಾಲ್ಲೂಕು ಆಡಳಿತ ಕ್ರಮ ತೆಗೆದುಕೊಳ್ಳಲು ಭಕ್ತರು ಮನವಿ ಮಾಡಿದ್ದಾರೆ.
ದೇವಾಲಯ ವಿವಾದಿತ ಕೇಂದ್ರವಾಗಿ ಗಮನ ಸೆಳೆದಿದೆ. ಅರ್ಚಕರ ಗುಂಪಿನಲ್ಲಿ ಹೊಡೆದಾಟ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗವೂ ನಡೆದಿತ್ತು. ದೇವಾಲಯದ ಹುಂಡಿ ಕಳವಿನ ಪ್ರಸಂಗ ಹೆಚ್ಚಾಗಿದ್ದು, ಕಳೆದ ವರ್ಷ ನಾಲ್ಕು ಬಾರಿ ಹುಂಡಿ ಕಳವು ನಡೆದಿತ್ತು.
ಬೆಟ್ಟದ ಮೆಟ್ಟಿಲ ಮುಂಭಾಗದಲ್ಲಿ ವಿಷ್ಣುಮೂರ್ತಿ ಇದ್ದು, ಸಮೀಪದ ಗ್ರಾಮದ ಕಿಡಿಗೇಡಿಗಳು ಭಗ್ನ ಮಾಡಿದ್ದರು. ಹುಂಡಿ ಕಳವು ತಡೆಯಲು ದೇವಾಲಯದ ಪಕ್ಕದಲ್ಲಿ ಕೊಠಡಿ ನಿರ್ಮಿಸಿ ಸಿಸಿ ಕ್ಯಮೆರಾ ಅಳವಡಿಸಿದ್ದರೂ ಅದರ ಸಂಪರ್ಕ ತೆರವುಗೊಳಿಸಿ ಕನ್ನ ಕೊರೆದು ಹುಂಡಿ ಕಳವು ನಡೆದಿತ್ತು. ಇದರ ನಿಯಂತ್ರಣಕ್ಕೆ ಸಂಬಂಧಪಟ್ಟವರು ಗಮನಹರಿಸಿಲ್ಲ ಎಂದು ರಂಗಸ್ವಾಮಿ, ನಾರಾಯಣ ದೂರಿದ್ದಾರೆ.
ಬೆಟ್ಟದಲ್ಲಿ ಅಧಿಕೃತ ಮತ್ತು ಅನಧಿಕೃತ ಅರ್ಚಕರ ನಡುವೆ ಪೈಪೋಟಿ ನಡೆಯುತ್ತಿದೆ. ಶ್ರಾವಣ ಮಾಸದ ಪೂಜೆ ಸಮಯದಲ್ಲಿ ದೇವರಿಗೆ ಅಭಿಷೇಕ ಮಾಡಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ನಿಗದಿತ ಸಮಯದಲ್ಲಿ ಮಾತ್ರ ಅಭಿಷೇಕ ಮಾಡುವ ಮೂಲಕ ಭಕ್ತರ ಭಾವನೆಗಳಿಗೆ ಸ್ಪಂದಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ಯತೀಶ್ ಒತ್ತಾಯಿಸಿದರು.
ಶ್ರಾವಣ ಮಾಸದ ಶನಿವಾರ ಮತ್ತು ಭಾನುವಾರ ಬರುವ ಭಕ್ತರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಕಂದಾಯ, ಮುಜರಾಯಿ, ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ. ದಾನಿಗಳು ಮತ್ತು ಭಕ್ತರಿಂದ ಸಂಗ್ರಹಿಸಿದ ಹಣ ಮತ್ತು ಚಿನ್ನ, ಬೆಳ್ಳಿ ವಸ್ತುಗಳಿಗೆ ದಾಖಲೆಗಳೇ ಇಲ್ಲದಾಗಿವೆ ಎಂದು ರಾಮಕೃಷ್ಣ ಹೇಳಿದರು.
ರಂಗಸ್ವಾಮಿ ಬೆಟ್ಟದ ಅವ್ಯವಸ್ಥೆಗಳ ಬಗ್ಗೆ ಗಮನಹರಿಸಿರುವ ಶಾಸಕ ಡಾ.ರಂಗನಾಥ ಈಚೆಗೆ ಬೆಂಗಳೂರಿನಲ್ಲಿ ಅರ್ಚಕ ವರ್ಗದ ಸಭೆ ನಡೆಸಿ, ಶ್ರಾವಣ ಮಾಸದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ಬರದಂತೆ, ಅವ್ಯವಸ್ಥೆಯಾಗದಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದಾರೆ. ಅವ್ಯವಸ್ಥೆಯಾದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.