ADVERTISEMENT

ಹಳ್ಳಿಗಳಿಗೆ ಪಡಿತರ; ಮಾಲೀಕರ ಜವಾಬ್ದಾರಿ

ತೂಕದಲ್ಲಿ ವ್ಯತ್ಯಾಸವಾದಲ್ಲಿ ನಿರ್ದಾಕ್ಷಿಣ್ಯ ಕ್ರಮ; ಸಚಿವ ಗೋಪಾಲಯ್ಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 14:26 IST
Last Updated 10 ಏಪ್ರಿಲ್ 2020, 14:26 IST
ಆರ್‌.ವಿ.ಕಾಲೊನಿಯ ಪಡಿತರ ಅಂಗಡಿಯಲ್ಲಿ ಪಡಿತರ ಪರಿಶೀಲಿಸಿದ ಕೆ.ಗೋಪಾಲಯ್ಯ. ಶಾಸಕ ಜ್ಯೋತಿಗಣೇಶ್, ಮುಖಂಡ ಸೊಗಡು ಶಿವಣ್ಣ ಇದ್ದಾರೆ
ಆರ್‌.ವಿ.ಕಾಲೊನಿಯ ಪಡಿತರ ಅಂಗಡಿಯಲ್ಲಿ ಪಡಿತರ ಪರಿಶೀಲಿಸಿದ ಕೆ.ಗೋಪಾಲಯ್ಯ. ಶಾಸಕ ಜ್ಯೋತಿಗಣೇಶ್, ಮುಖಂಡ ಸೊಗಡು ಶಿವಣ್ಣ ಇದ್ದಾರೆ   

ತುಮಕೂರು: ಪಡಿತರ ಅಂಗಡಿಗಳಿಂದ 3 ಕಿ.ಮೀ.ಗೂ ಹೆಚ್ಚು ದೂರವಿರುವ ಹಳ್ಳಿಗಳಿಗೆ ಅಂಗಡಿ ಮಾಲೀಕರೇ ಪಡಿತರ ತೆಗೆದುಕೊಂಡು ಹೋಗಿ, ಸ್ಥಳದಲ್ಲೇ ತೂಕ ಮಾಡಿ ವಿತರಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಶುಕ್ರವಾರ ಸೂಚಿಸಿದರು.

ಬಡವರಿಗೆ ತೊಂದರೆ ಆಗದಂತೆ ಪಡಿತರ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರ ಅನ್ನ ಕಸಿಯುವವರ ವಿರುದ್ಧ ದೂರು ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೂಕದಲ್ಲಿ ವ್ಯತ್ಯಾಸವಾದರೆ ಕ್ರಮಕೈಗೊಳ್ಳಲಾಗುವುದು. ಏ. 25ರೊಳಗೆ ಪಡಿತರ ವಿತರಿಸಬೇಕು ಎಂದು ಹೇಳಿದರು.

ADVERTISEMENT

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಜಿಲ್ಲೆಯಲ್ಲಿ ಶೇ 53ರಷ್ಟು ಪಡಿತರ ವಿತರಣೆಯಾಗಿದೆ ಎಂದು ಮಾಹಿತಿ ನೀಡಿದರು.

ವರದಿಗೆ ಸೂಚನೆ: ಹೆಬ್ಬೂರಿಗೆ ಭೇಟಿ ನೀಡಿದಾಗ ಅಲ್ಲಿನ ಪಡಿತರ ಅಂಗಡಿಯೊಂದರಲ್ಲಿ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಹಳೇ ತೂಕ ಮಾಪಕ ಯಂತ್ರ ಇಟ್ಟಿದ್ದಾರೆ ಎಂದು ಕೆಲವರು ದೂರಿದರು. ಮಾಲೀಕ ಯಾವುದೇ ವ್ಯತ್ಯಾಸ ಮಾಡುತ್ತಿಲ್ಲ ಎಂದು ಪ್ರತಿಪಾದಿಸಿದರು. ಅಧಿಕಾರಿಗಳು ಯಂತ್ರ ಪರಿಶೀಲಿಸಿದಾಗ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಈ ಬಗ್ಗೆ ಗುಂಪುಗಳ ನಡುವೆ ವಾದಗಳು ಜರುಗಿದವು. ಆಗ ಸಚಿವರು, ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ವರದಿ ನೀಡುವಂತೆ ಶ್ರೀನಿವಾಸಯ್ಯ ಅವರಿಗೆ ನಿರ್ದೇಶಿಸಿದರು.

ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್,ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಇದ್ದರು.

ಎರಡು ಅಂಗಡಿಗೆ ನೋಟಿಸ್
ತುಮಕೂರು ನಗರದ ಉಪ್ಪಾರಹಳ್ಳಿ, ವಿನಾಯಕನಗರದ ಅಂಗಡಿಗಳು ಸೂಕ್ತ ಸಮಯಕ್ಕೆ ಬಾಗಿಲು ತೆರೆಯುತ್ತಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಈ ಅಂಗಡಿಗಳ ಮಾಲೀಕರಿಗೆ ಶ್ರೀನಿವಾಸಯ್ಯ ನೋಟಿಸ್ ಜಾರಿ ಮಾಡಿದ್ದಾರೆ.

ತೂಕದಲ್ಲಿ ಮೋಸ; ಪರವಾನಗಿ ರದ್ದು
ಹೊನ್ನುಡಿಕೆ ಹ್ಯಾಂಡ್ ಪೋಸ್ಟ್‌ನಲ್ಲಿ ಗುರುಡಯ್ಯ ಎಂಬುವರು ನಡೆಸುತ್ತಿದ್ದ ಪಡಿತರ ಅಂಗಡಿಯ ಪರವಾನಗಿ ರದ್ದುಪಡಿಸಲು ತಹಶೀಲ್ದಾರ್ ಮೋಹನ್ ಕುಮಾರ್, ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ್ದರು. ಇಬ್ಬರು ಗ್ರಾಹಕರು ಪಡಿತರ ಪಡೆದಿದ್ದರು. ಆ ಪಡಿತರವನ್ನು ತಹಶೀಲ್ದಾರ್ ಮತ್ತೆ ತೂಕ ಮಾಡಿಸಿದ್ದಾರೆ. ಒಬ್ಬರ ಪಡಿತರದಲ್ಲಿ 10 ಕೆ.ಜಿ ಹಾಗೂ ಮತ್ತೊಬ್ಬರಲ್ಲಿ 5 ಕೆ.ಜಿ ಕಡಿಮೆ ಇತ್ತು. ತಕ್ಷಣ ಅಂಗಡಿಗೆ ಬೀಗ ಹಾಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.