ADVERTISEMENT

ಐಎಎಸ್ ಅಧಿಕಾರಿ ಭೂಬಾಲನ್ ಮರು ನಿಯೋಜನೆ: ತುಮಕೂರು ಪಾಲಿಕೆಯಲ್ಲಿ ಹರ್ಷಾಚರಣೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 7:23 IST
Last Updated 18 ಡಿಸೆಂಬರ್ 2019, 7:23 IST
ಟಿ.ಭೂಬಾಲನ್
ಟಿ.ಭೂಬಾಲನ್   

ತುಮಕೂರು:‘ಜನಸ್ನೇಹಿ’ಐಎಎಸ್ ಅಧಿಕಾರಿ ಎಂದೇ ಪ್ರಶಂಸೆಗೆ ಪಾತ್ರರಾಗಿರುವ ಟಿ.ಭೂಬಾಲನ್ ಅವರು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಇಂದು ಪುನಃ ಅಧಿಕಾರ ವಹಿಸಿಕೊಂಡರು.

ಅವರನ್ನು ಸ್ವಾಗತಿಸಲು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲಿಕೆ ಆವರಣ ತುಂಬಾ ಪಟಾಕಿಗಳನ್ನು ಸಿಡಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು. ಅಧಿಕಾರಿಗೆ ಹಾರ, ಶಾಲು ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಟಿ.ಭೂಬಾಲನ್ ಅವರು 'ಪ್ರಜಾವಾಣಿ'ಯೊಂದಿಗೆ ಮಾತನಾಡುತ್ತ, ತುಮಕೂರು ಜನರ ಪ್ರೀತಿ, ವಿಶ್ವಾಸ ಕಂಡು ನನಗೆ ತುಂಬಾ ಖುಷಿಯಾಗುತ್ತಿದೆ. ಇನ್ನೂ ಚನ್ನಾಗಿ ಕೆಲಸ ಮಾಡಬೇಕು ಅನಿಸುತ್ತಿದೆ ಎಂದರು.

ADVERTISEMENT

‘ಈ ಮೊದಲು ಪಾಲಿಕೆಯಲ್ಲಿ ಇದ್ದಾಗ ಕಸದ ಸಮಸ್ಯೆ ನಿವಾರಣೆ, ಪ್ಲಾಸ್ಟಿಕ್ ನಿಷೇಧಕ್ಕೆ ಕಠಿಣ ಕ್ರಮ ಕೈಗೊಂಡಿದ್ದೆ. ಎರಡು ದಿನ ನಗರದಲ್ಲಿ ರೌಂಡ್ಸ್ ಹೋಗಿ ಆ ಕ್ರಮಗಳ ಅನುಷ್ಠಾನದ ಕುರಿತು ತಿಳಿದುಕೊಳ್ಳುತ್ತೇನೆ. ನಮ್ಮ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚಿದ್ದರೆ ಕ್ರಮ ವಹಿಸುತ್ತೇನೆ’ ಎಂದರು.

‘ಗೋಕಾಕ್ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ನಿಯೋಜಿಸಲು ಸರ್ಕಾರ ನನ್ನನ್ನು ಬೆಳಗಾವಿಯ ಮಲಪ್ರಭಾ-ಘಟಪ್ರಭಾ ಯೋಜನೆಯ ವಿಶೇಷ ಜಿಲ್ಲಾಧಿಕಾರಿ(ಭೂ ಸ್ವಾಧೀನ) ಆಗಿ ವರ್ಗಾವಣೆ ಮಾಡಿತ್ತು. ಮತ್ತೆ ತುಮಕೂರಿಗೆ ಬರುತ್ತೇನೆ ಎಂಬ ವಿಶ್ವಾಸ ಇತ್ತು. ಈ ನಗರಕ್ಕೆ ಬರುವ ಇಚ್ಛೆಯೂ ಇತ್ತು’ ಎಂದು ಮನದ ಮಾತು ಬಿಚ್ಚಿಟ್ಟರು.

‘ಸರ್ಕಾರದ ನಿರ್ಧಾರದಿಂದ ಪುನಃ ಬಂದಿದ್ದೇನೆ. ಉತ್ತಮ ಆಡಳಿತಕ್ಕಾಗಿ ನಾನು ಎಲ್ಲರಿಂದ ಸಹಕಾರ ಮಾತ್ರ ನಿರೀಕ್ಷಿಸುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.