ADVERTISEMENT

ಇಂದಿನಿಂದ ಕೊಬ್ಬರಿ ಖರೀದಿ: ಸರದಿ ಸಾಲಿನಲ್ಲಿ ಕಲ್ಲು, ಚಪ್ಪಲಿ, ಚೀಲ!

ಒಂದು ದಿನ ಮುಂಚಿತವಾಗಿ ಸಾಲಿನಲ್ಲಿ ನಿಂತ ರೈತರು* ಖರೀದಿ ಕೇಂದ್ರದ ಬಳಿ ರಾತ್ರಿ ವಾಸ್ತವ್ಯ* ಶಾಮಿಯಾನ್‌ಗಳಲ್ಲಿ ವಿಶ್ರಾಂತಿ, ಹರಟೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 0:30 IST
Last Updated 4 ಮಾರ್ಚ್ 2024, 0:30 IST
ತಿಪಟೂರು ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಖರೀದಿ ಕೇಂದ್ರದ ಮುಂದೆ ಭಾನುವಾರ ಸರತಿ ಸಾಲಿನಲ್ಲಿ ಚಪ್ಪಲಿ ಇಟ್ಟು ಸ್ಥಳ ಕಾಯ್ದಿರಿಸಿರುವ ರೈತರು
ತಿಪಟೂರು ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಖರೀದಿ ಕೇಂದ್ರದ ಮುಂದೆ ಭಾನುವಾರ ಸರತಿ ಸಾಲಿನಲ್ಲಿ ಚಪ್ಪಲಿ ಇಟ್ಟು ಸ್ಥಳ ಕಾಯ್ದಿರಿಸಿರುವ ರೈತರು   

ತಿಪಟೂರು/ತುಮಕೂರು: ನಾಫೆಡ್‌ ಮೂಲಕ ಕೊಬ್ಬರಿ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ಸೋಮವಾರದಿಂದ (ಮಾರ್ಚ್‌ 4) ಆರಂಭವಾಗಲಿದ್ದು, ರೈತರು ಒಂದು ದಿನ ಮುಂಚಿತವಾಗಿಯೇ (ಭಾನುವಾರ ಮಧ್ಯಾಹ್ನದಿಂದಲೇ) ಕೊಬ್ಬರಿ ಖರೀದಿ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ರೈತರು ಒಂದು ದಿನ ಮುಂಚಿತವಾಗಿ ತಿಪಟೂರು ತಾಲ್ಲೂಕಿನ ಮೂರು ಖರೀದಿ ಕೇಂದ್ರಗಳ ಬಳಿ ಸೇರಿದ್ದಾರೆ. ತಿಪಟೂರು ಎಪಿಎಂಸಿ ಮಾರುಕಟ್ಟೆಯ ಆವರಣ, ಕೊನೆಹಳ್ಳಿ, ಕರಡಾಳು ಎಪಿಎಂಸಿಯ ಕೊಬ್ಬರಿ ಖರೀದಿ ಕೇಂದ್ರದ ಬಳಿ ಸಾಲಿನಲ್ಲಿ ನಿಂತಿದ್ದಾರೆ.

ಸರದಿಯಲ್ಲಿ ನಿಲ್ಲಲು ಆಗದ ಕೆಲವರು ತಮ್ಮ ಬದಲು ಬ್ಯಾಗ್‌, ಚಪ್ಪಲಿ, ಕಲ್ಲು ಇಟ್ಟಿದ್ದಾರೆ. ಎಲ್ಲ ಕಡೆ ನೆರಳಿಗೆ ಶಾಮಿಯಾನ, ಕುಡಿಯುವ ನೀರು, ಇಂಟರ್‌ನೆಟ್‌ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.  

ADVERTISEMENT

ಕರಡಾಳು ಎಪಿಎಂಸಿ ಆವರಣದಲ್ಲಿ ರೈತರು ಸಾಲಿನಲ್ಲಿ ಚಪ್ಪಲಿ ಇಟ್ಟು ಕಾಯತೊಡಗಿದ್ದಾರೆ. ಎಪಿಎಂಸಿ ಅಧಿಕಾರಿಗಳು ಎಷ್ಟೇ ಹೇಳಿದರೂ ರೈತರು ಮನೆಗೆ ಹಿಂದಿರುಗಲು ಸಿದ್ಧರಿಲ್ಲ.

ತಿಪಟೂರು, ತುರುವೇಕೆರೆ ತಾಲ್ಲೂಕಿನಲ್ಲಿ ತಲಾ ಆರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಹುಳಿಯಾರಿನಲ್ಲಿ ತಲಾ ಎರಡು, ತುಮಕೂರು, ಕುಣಿಗಲ್, ಶಿರಾ ತಾಲ್ಲೂಕಿನಲ್ಲಿ ತಲಾ ಒಂದರಂತೆ ಜಿಲ್ಲೆಯಲ್ಲಿ ಒಟ್ಟು 21 ಖರೀದಿ ಕೇಂದ್ರಗಳಲ್ಲಿ ಕೊಬ್ಬರಿ ಖರೀದಿ ನಡೆಯಲಿದೆ. ಎಲ್ಲ ಕೇಂದ್ರಗಳಲ್ಲಿ ಖರೀದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮುಂದಿನ 45 ದಿನಗಳ ವರೆಗೆ ಕೊಬ್ಬರಿ ನೋಂದಣಿ ಮತ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಎಕರೆಗೆ ಆರು ಕ್ವಿಂಟಲ್, ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿದೆ.

‘ಕಳೆದ ಬಾರಿ ನೋಂದಣಿ ಪ್ರಕ್ರಿಯೆ ಬೇಗ ಮುಗಿದಿದ್ದರಿಂದ ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ನೋಂದಣಿ ಮಾಡಿಸಿಕೊಳ್ಳೋಣ ಎಂದು ಒಂದು ದಿನ ಮುಂಚಿತವಾಗಿ ಬಂದಿದ್ದೇವೆ. ರಾತ್ರಿ ಇಲ್ಲಿಯೇ ಇದ್ದು, ಬೆಳಗ್ಗೆ ನೋಂದಣಿ ಮಾಡಿಸಿಕೊಂಡೇ  ಮನೆಗೆ ಹೋಗುತ್ತೇವೆ’ ಎಂದು ರೈತ ಕೀರ್ತಿ ಸಾಸಲಹಳ್ಳಿ ಪ್ರತಿಕ್ರಿಯಿಸಿದರು.

ತಿಪಟೂರು ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಖರೀದಿ ಕೇಂದ್ರದ ಬಳಿ ಭಾನುವಾರವೇ ಕಾಯ್ದು ಕುಳಿತಿರುವ ರೈತರು 
ತಿಪಟೂರು ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಖರೀದಿ ಕೇಂದ್ರದ ಬಳಿ ಭಾನುವಾರವೇ ಕಾಯ್ದು ಕುಳಿತಿರುವ ರೈತರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.