ADVERTISEMENT

ಎಲ್ಲೆಡೆ ರಾಷ್ಟ್ರಾಭಿಮಾನದ ಸಂಭ್ರಮ

ಮೊಳಗಿದ ರಾಷ್ಟ್ರಗೀತೆಗಳು, ಹಾರಾಡಿದ ತ್ರಿವರ್ಣ ಧ್ವಜ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 13:59 IST
Last Updated 26 ಜನವರಿ 2023, 13:59 IST
ತುಮಕೂರಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ಗುರುವಾರ ಗಣರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು
ತುಮಕೂರಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ಗುರುವಾರ ಗಣರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು   

ತುಮಕೂರು: ನಗರದೆಲ್ಲೆಡೆ ಗುರುವಾರ ರಾಷ್ಟ್ರ ಗೀತೆಗಳು ಮೊಳಗಿದವು. ತ್ರಿವರ್ಣ ಧ್ವಜಗಳು ಹಾರಾಡಿದವು. ವಿದ್ಯಾರ್ಥಿಗಳು ತಮ್ಮ ನೃತ್ಯ ಪ್ರದರ್ಶನದ ಮೂಲಕ ರಾಷ್ಟ್ರಾಭಿಮಾನ ಮೆರೆದರು.

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು.

‘ಮೇರಾ ಭಾರತ್ ಮಹಾನ್’ ಹಾಡಿಗೆ ಆರ್ಯ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹೆಜ್ಜೆ ಹಾಕಿದರು. ಮಕ್ಕಳ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಹೊರಪೇಟೆ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು, ಸೀರೆ ತೊಟ್ಟು ನೃತ್ಯ ಪ್ರದರ್ಶಿಸುವ ಮುಖಾಂತರ ಸಂಭ್ರಮಿಸಿದರು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಿದರು. ಸಿದ್ಧಗಂಗಾ, ಕಾಳಿದಾಸ ಪ್ರೌಢಶಾಲೆ ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಭಾರತ ಮಾತೆ, ಸ್ವಾತಂತ್ರ್ಯಕ್ಕಾಗಿ ಮಡಿದ ಹಲವು ಮಹನೀಯರನ್ನು ಸ್ಮರಿಸಿದರು.

ADVERTISEMENT

ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. 2022ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಆಡಳಿತದಿಂದ ಉಚಿತವಾಗಿ ಲ್ಯಾಪ್‌ಟಾಪ್ ನೀಡಲಾಯಿತು. ಪ್ರವಾಸೋದ್ಯಮ ಇಲಾಖೆಯಿಂದ ಹೊರ ತಂದಿರುವ ಜಿಲ್ಲೆಯ ‘ಪ್ರವಾಸಿ ತಾಣಗಳು’ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಬಿಡುಗಡೆ ಮಾಡಿದರು.

ಗ್ರಾಮ ಒನ್ ಕೇಂದ್ರದಲ್ಲಿ ಜನರಿಗೆ ಉತ್ತಮ ಸೇವೆ ನೀಡಿದ ಸಿಬ್ಬಂದಿಯನ್ನು ಗೌರವಿಸಲಾಯಿತು. ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗುಬ್ಬಿ ತಾಲ್ಲೂಕಿನ ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ನೀಡಲಾಯಿತು.

ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಥಟ್‌ ಅಂತರ ಉತ್ತರ ನೀಡುವ ತಿಪಟೂರಿನ ಮೂರುವರೆ ವರ್ಷದ ಯೋಗೇಶ್‌ ಎಲ್ಲರ ಗಮನ ಸೆಳೆದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಕ್ಕರೆ ನಾಡು, ಅತಿ ಹೆಚ್ಚು ರೇಷ್ಮೆ ಬೆಳೆಯುವ ಜಿಲ್ಲೆ, ಹೆಚ್ಚು ಗೋದಿ ಬೆಳೆಯುವ ರಾಜ್ಯ ಯಾವುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹೇಳುವ ಮೂಲಕ ತಮ್ಮ ಜ್ಞಾನ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.