ADVERTISEMENT

ಮರುಮೌಲ್ಯಮಾಪನ ಶುಲ್ಕ ಕಡಿತಕ್ಕೆ ಆಗ್ರಹ

ಡಿಡಿಪಿಯು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಂಗ್ರೆಸ್ ಮುಖಂಡರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 15:03 IST
Last Updated 21 ಜುಲೈ 2020, 15:03 IST
ಡಿಡಿಪಿಯು ನರಸಿಂಹಮೂರ್ತಿ ಅವರಿಗೆ ಕಾಂಗ್ರೆಸ್‌ ಮುಖಂಡರು ಮನವಿ ಸಲ್ಲಿಸಿದರು
ಡಿಡಿಪಿಯು ನರಸಿಂಹಮೂರ್ತಿ ಅವರಿಗೆ ಕಾಂಗ್ರೆಸ್‌ ಮುಖಂಡರು ಮನವಿ ಸಲ್ಲಿಸಿದರು   

ತುಮಕೂರು: ದ್ವಿತೀಯ ಪಿಯುಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಶುಲ್ಕವನ್ನು ಕಡಿಮೆ ಮಾಡಬೇಕು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೀಘ್ರ ಪೂರಕ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಮುಖಂಡರು ಡಿಡಿಪಿಯು ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

‘ಹಲವು ವಿದ್ಯಾರ್ಥಿಗಳು ಇಂಗ್ಲಿಷ್, ಇತರೆ ವಿಷಯಗಳಿಗೆ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಶುಲ್ಕವನ್ನು ಪ್ರತಿ ವಿಷಯಕ್ಕೆ ₹1,670, ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಗೆ ₹520ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಕೊರೊನಾದಿಂದಾಗಿ ಜನರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ. ಶುಲ್ಕ ನಿಗದಿ ದುಬಾರಿಯಾಗಿದ್ದು ಕಡಿತಗೊಳಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಒತ್ತಾಯಿಸಿದರು.

ಪಿಯುಸಿ ಫಲಿತಾಂಶದಲ್ಲಿ ಕಳೆದ ಬಾರಿ 16ನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ 23ನೇ ಸ್ಥಾನಕ್ಕೆ ಕುಸಿದಿದೆ. ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಮಹತ್ವದ ಘಟ್ಟವಾಗಿದ್ದು ಜಿಲ್ಲೆಯಲ್ಲಿ ಉಪನ್ಯಾಸಕರ ಕೊರತೆ, ಮೇಲುಸ್ತುವಾರಿ ಸಮಸ್ಯೆಗಳಿಂದ ಫಲಿತಾಂಶದಲ್ಲಿ ಸಾಕಷ್ಟು ಹಿನ್ನಡೆಯಾಗಿದೆ ಎಂದರು.

ADVERTISEMENT

ಹಲವು ಕಾಲೇಜು ತೀರ ಕಳಪೆ ಸಾಧನೆ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು. ಕಳಪೆ ಫಲಿತಾಂಶ ಬಂದಿರುವ ಕಾಲೇಜುಗಳಿಗೆ ಅಕ್ಕಪಕ್ಕದ ಕಾಲೇಜುಗಳ ತಜ್ಞ ಮತ್ತು ವಿದ್ಯಾರ್ಥಿ ಮಿತ್ರ ಮಾರ್ಗದರ್ಶಿ ಉಪನ್ಯಾಸಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ಮುಖಂಡರಾದ ರೇವಣಸಿದ್ಧಯ್ಯ, ಮಂಜುನಾಥ್, ಇಕ್ಬಾಲ್ ಅಹಮದ್, ಮರಿಚನ್ನಮ್ಮ, ವೆಂಕಟೇಶ್, ವಾಲೆಚಂದ್ರಯ್ಯ, ಕೊಂಡವಾಡಿ ಸುಮುಖ್, ನಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.