ADVERTISEMENT

ಅರ್ಚಕರ ಸಂಕಷ್ಟಕ್ಕೆ ಸ್ಪಂದನೆ: ಶಾಸಕ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 6:59 IST
Last Updated 18 ಸೆಪ್ಟೆಂಬರ್ 2020, 6:59 IST
ತುರುವೇಕೆರೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ದೇವಾಲಯಗಳ ಅರ್ಚಕರು ಶಾಸಕ ಮಸಾಲ ಜಯರಾಂ ಅವರನ್ನು ಸನ್ಮಾನಿಸಿದರು
ತುರುವೇಕೆರೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ದೇವಾಲಯಗಳ ಅರ್ಚಕರು ಶಾಸಕ ಮಸಾಲ ಜಯರಾಂ ಅವರನ್ನು ಸನ್ಮಾನಿಸಿದರು   

ತುರುವೇಕೆರೆ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ದೇವಾಲಯಗಳ ಅರ್ಚಕರು ಬಹಳ ಸಂಕಷ್ಟದಲ್ಲಿದ್ದಾರೆ. ದೇವಾಲಯಗಳಿಗೆಂದೇ ಸರ್ಕಾರ ಮೀಸಲಿಟ್ಟಿರುವ ಕೊಡಗಿ ಜಮೀನು ಗಳು ಅರ್ಚಕರ ಕುಟುಂಬಕ್ಕೆ ದೊರೆಯು ವಂತಾಗಬೇಕು ಎಂದು ಶಾಸಕ ಮಸಾಲ ಜಯರಾಂ ಅಭಿಪ್ರಾಯಪಟ್ಟರು.

ಪಟ್ಟಣದ ಬೇಟೇರಾಯಸ್ವಾಮಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ನೌಕರರ ಸಂಘ ಹಾಗೂ ತುರುವೇಕೆರೆ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಲ್ಲ ವರ್ಗದ ಜನರಂತೆ ದೇವಾಲಯಗಳ ಅರ್ಚಕ ಕುಟುಂಬಗಳೂ ಸಂಕಷ್ಟದಲ್ಲಿವೆ. ಅರ್ಚಕರಿಗೆ ನೀಡುವ ತಸ್ತಿಕ್ ಹಣದ ಬಗ್ಗೆ ಅನೇಕ ದೇವಾಲಯಗಳಲ್ಲಿ ಗೊಂದಲ ಇರುವುದು ಗಮನಕ್ಕೆ ಬಂದಿದೆ. ಶೀಘ್ರ ಬಗೆಹರಿಸಲಾಗುವುದು. ತಾಲ್ಲೂಕಿನಲ್ಲಿ ಆಗಮ ಅಧ್ಯಯನ ಮಾಡಲು ಸಂಸ್ಕೃತ ಪಾಠಶಾಲೆ ಪ್ರಾರಂಭಿಸುವ, ಅರ್ಚಕರಿಗಾಗಿ ಕಟ್ಟಡ ನಿರ್ಮಾಣ ಮಾಡುವ ವಿಚಾರದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ADVERTISEMENT

ತಹಶೀಲ್ದಾರ್ ನಯೀಂ ಉನ್ನೀಸಾ ಮಾತನಾಡಿ, ಸರ್ಕಾರದ ಆದೇಶದಂತೆ ಅರ್ಚಕರು ತೀರಿಕೊಂಡ ಕೆಲವು ಪ್ರಕರಣಗಳಲ್ಲಿ ಅವರ ಮಕ್ಕಳನ್ನೇ ಅರ್ಚಕರಾಗಿ ನೇಮಿಸಲಾಗಿದೆ. ಯಾವುದಾದರೂ ಪ್ರಕರಣ ಬಾಕಿ ಇದ್ದರೆ ನನ್ನ ಗಮನಕ್ಕೆ ತಂದರೆ ಶೀಘ್ರ ಕ್ರಮ ವಹಿಸಲಾಗುವುದು. ಅರ್ಚಕರು ಆಧಾರ್ ಕಾರ್ಡ್‌ ಹಾಗೂ ಫೊಟೋ ನೀಡಿದರೆ ಗುರುತಿನ ಚೀಟಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಇದೇ ವೇಳೆ 185 ಮಂದಿ ಅರ್ಚಕರಿಗೆ ಆಹಾರದ ಕಿಟ್ ವಿತರಿಸಲಾಯಿತು. ಸಮಾರಂಭದಲ್ಲಿ ಶ್ರೀವತ್ಸ, ಸೋಮಣ್ಣ, ರಾಮೇಗೌಡ, ಹೊನ್ನಪ್ಪ, ರಂಗನಾಥ್, ಸೋಮಶೇಖರ್, ಸದಸ್ಯರಾದ ಮುನಿ ಯೂರು ರಾಮಚಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.