
ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ, ತೋವಿನಕೆರೆ, ಕೋಳಾಲ ಹೋಬಳಿ ವ್ಯಾಪ್ತಿಯ ಗಡಿ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಹಲವು ರಸ್ತೆಗಳು ತೀವ್ರ ಹದಗೆಟ್ಟಿವೆ.
ಹೊಳವನಹಳ್ಳಿ- ಬೊಮ್ಮಲದೇವಿಪುರ ಸಂಪರ್ಕ ರಸ್ತೆ ಮತ್ತು ಅಕ್ಕಾಜಿಹಳ್ಳಿಯಿಂದ ಬೈರೇನಹಳ್ಳಿ ಸಂಪರ್ಕಿಸುವ ರಸ್ತೆ ಅಲ್ಲಲ್ಲಿ ಸಂಪೂರ್ಣ ಹಾಳಾಗಿದೆ. ಇದು ತಾಲ್ಲೂಕಿನ ಗಡಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಾಗಿದ್ದು, ಅಭಿವೃದ್ಧಿ ಕಾಣದೆ ಈ ಭಾಗದ ಜನರು ನಿತ್ಯ ಪರಿತಪಿಸುವಂತಾಗಿದೆ.
ತೋವಿನಕೆರೆ-ಚಿಕ್ಕತೊಟ್ಲುಕೆರೆ ಸಂಪರ್ಕಿಸುವ ರಸ್ತೆಯ ಕುಚ್ಚಂಗಿ ಗೇಟ್ ಬಳಿ ರೈಲ್ವೆ ಕಾಮಗಾರಿ ಸ್ಥಗಿತಗೊಂಡಿರುವ ಸ್ಥಳದಲ್ಲಿ ರಸ್ತೆ ತೀವ್ರ ಹಾಳಾಗಿದೆ. ಮೊಣಕಾಲು ಉದ್ದದ ಗುಂಡಿಗಳು ಬಿದ್ದು ನೀರು ತುಂಬಿಕೊಂಡು ಕೆರೆಯಂತಾಗಿರುವ ರಸ್ತೆಯಲ್ಲಿ ಜನ ಮತ್ತು ವಾಹನಗಳ ಓಡಾಟಕ್ಕೆ ತೀವ್ರ ಅಡಚಣೆಯಾಗಿದೆ.
ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು, ಮಳೆ ಬಂದಾಗ ಈ ಪ್ರದೇಶಗಳಲ್ಲಿ ನೀರು ನಿಲ್ಲುವುದರಿಂದ ರಸ್ತೆ ಮುಚ್ಚಿಹೋಗುತ್ತದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಮತ್ತು ಇತರ ವಾಹನ ಚಾಲಕರು ಅಪಘಾತಗಳಿಗೆ ಗುರಿಯಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಎರಡೂ ಕಡೆಗಳಲ್ಲೂ ಅನೇಕ ಅಪಘಾತ ನಡೆದಿದ್ದು, ಜನರು ಗಂಭೀರ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬಿಳೇಕಲ್ಲಹಳ್ಳಿ, ಕರಿಚಿಕ್ಕನಹಳ್ಳಿ ಬಳಿ ರಸ್ತೆ ತೀವ್ರ ಹದಗೆಟ್ಟ ಪರಿಣಾಮ ರಾತ್ರಿ ಸಮಯದಲ್ಲಿ ರಸ್ತೆ ಗುಂಡಿ ಕಾಣದೆ ವಾಹನ ಅಪಘಾತಕ್ಕೀಡಾದ ನಿದರ್ಶನಗಳಿವೆ.
ತೊಂಡೇಬಾವಿಯಲ್ಲಿರುವ ಸಿಮೆಂಟ್ ಕಾರ್ಖಾನೆಯಿಂದ ಬರುವ ಭಾರಿ ಲಾರಿಗಳು ನಿಯಮ ಮೀರಿ ಈ ರಸ್ತೆಗಳಲ್ಲಿ ಸಂಚರಿಸುವುದರಿಂದ, ಕೆಲವೇ ವರ್ಷಗಳಲ್ಲಿ ರಸ್ತೆಗಳು ಹಾಳಾಗಿವೆ. ರಸ್ತೆ ಗುಣಮಟ್ಟ ಕಳಪೆಯಿದ್ದು, ಭಾರಿ ವಾಹನಗಳ ಒತ್ತಡದಿಂದ ರಸ್ತೆಗಳು ಬೇಗನೆ ಹಾಳಾಗುತ್ತಿವೆ ಎಂದು ಈ ಭಾಗದ ಜನರು ಆರೋಪಿಸುತ್ತಾರೆ.
ಕೊರಟಗೆರೆ-ಮಧುಗಿರಿ ರಾಷ್ಟ್ರೀಯ ಹೆದ್ದಾರಿಯ ತುಂಬಾಡಿ ಬಳಿಯ ಟೋಲ್ ಬಳಿ ರಸ್ತೆ ಸಹ ತೀವ್ರ ಹಾಳಾಗಿದೆ. ಟೋಲ್ ತೆರವು ಮಾಡಿದ ನಂತರ ಅಲ್ಲಿ ಇದ್ದ ಪರಿಕರಗಳನ್ನು ಸ್ಥಳಾಂತರಿಸುವಾಗ ಅಗೆದ ರಸ್ತೆಯನ್ನು ಪುನಃ ನಿರ್ಮಿಸದೆ ಹಾಗೆ ಬಿಡಲಾಗಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಅನೇಕ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
ತಾಲ್ಲೂಕಿನ ಹೃದಯ ಭಾಗ ಹಾಗೂ ಆಡಳಿತ ಕೇಂದ್ರವಾದ ತಾಲ್ಲೂಕು ಕಚೇರಿ ಮುಂಭಾಗದ ಮಧುಗಿರಿ-ಕೊರಟಗೆರೆ ಮುಖ್ಯರಸ್ತೆಯಲ್ಲೆ ರಸ್ತೆ ತೀವ್ರ ಹಾಳಾಗಿದೆ. ಜೊತೆಗೆ ಪಟ್ಟಣದ ಹೊರವಲಯದ ಹುಲಿಕುಂಟೆ ಬೈಪಾಸ್ ಬಳಿ ರಸ್ತೆ ಮಧ್ಯೆ ದೊಡ್ಡ ಗುಂಡಿ ಬಿದ್ದಿದ್ದು, ನೀರಿನ ಹೊಂಡದಂತಾಗಿದೆ. ಇದರಿಂದ ರಸ್ತೆ ಸರಿಯಾಗಿ ಕಾಣದೆ ಅಪಘಾತಗಳು ಉಂಟಾಗುತ್ತಿವೆ. ತಾಲ್ಲೂಕು ಕಚೇರಿ ಹಿಂಭಾಗದ ವಸತಿ ಕೇಂದ್ರ, ಪೊಲೀಸ್ ಠಾಣೆ ಸೇರಿದಂತೆ ಇತರೆ ಕಚೇರಿಗಳಿಗೆ ಹೋಗುವ ರಸ್ತೆಗಳು 90ರ ದಶಕದಲ್ಲಿ ನಿರ್ಮಾಣ ಮಾಡಲಾಗಿದೆ. ತದನಂತರ ಅವುಗಳನ್ನ ಅಭಿವೃದ್ಧಿಪಡಿಸಿಲ್ಲ. ಇದರಿಂದ ತಾಲ್ಲೂಕು ಕಚೇರಿ ಪಕ್ಕದ ಕೃಷಿ ಇಲಾಖೆ, ವಸತಿ ಸಮುಚ್ಛಯಗಳಿಗೆ ಹೋಗುವ ರಸ್ತೆ ಹೊಂಡ ಬಿದ್ದು ಕೆಸರಿನ ಗದ್ದೆಯಾಗಿವೆ.
ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಳೆ ಬಂದರೆ ನೀರು ನಿಲ್ಲುವುದರಿಂದ ರಸ್ತೆ ಕಾಣುವುದೇ ಕಷ್ಟ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿ.– ಗೌ.ರಾ.ರಾಮಮೂರ್ತಿ, ಗೌರಗೊಂಡನಹಳ್ಳಿ
ಭಾರಿ ಲಾರಿಗಳು ನಮ್ಮ ರಸ್ತೆಗಳನ್ನು ಹಾಳುಮಾಡಿವೆ. ರಸ್ತೆ ನಿರ್ಮಾಣವಾದ ಕೆಲವು ವರ್ಷಗಳಲ್ಲೇ ಹೀಗಾಗಿದೆ. ಇದರಿಂದ ನಮ್ಮ ಗ್ರಾಮಗಳು ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ.– ಬಿ.ಕೆ.ರಮೇಶ್, ಬೊಮ್ಮಲದೇವಿಪುರ
ಕೊರಟಗೆರೆ ಮುಖ್ಯರಸ್ತೆಯ ತಾಲ್ಲೂಕು ಕಚೇರಿ ಮುಂಭಾಗ ಹುಲಿಕುಂಟೆ ಬೈಪಾಸ್ ರಸ್ತೆ ತೀವ್ರ ಸ್ವರೂಪದಲ್ಲಿ ಹಾಳಾಗಿದೆ. ಈ ಜಾಗದಲ್ಲಿ ಅನೇಕ ಅಪಘಾತಗಳಾದರೂ ದುರಸ್ತಿ ಕೈಗೊಳ್ಳುತ್ತಿಲ್ಲ.– ದರ್ಶನ್, ಪದವಿ ವಿದ್ಯಾರ್ಥಿ
ಕೊರಟಗೆರೆ ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಕ್ರಷರ್ ಲಾರಿಗಳ ಹಾವಳಿಯಿಂದ ಹಾಳಾಗುತ್ತಿವೆ. ನಿಯಮ ಮೀರಿ ಭಾರಿ ಲಾರಿಗಳು ಓಡಾಡುವ ಕಾರಣ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಸರ್ಕಾರ ಕ್ರಮಕೈಗೊಳ್ಳಬೇಕು.– ಬಿ.ಕೆ.ನಾರಾಯಣ, ಬಿ.ಡಿ ಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.