ADVERTISEMENT

ಕೆಸರುಮಯ ರಸ್ತೆಗಳಿಗೆ ಮುಕ್ತಿ ಎಂದು?

ಹದಗೆಟ್ಟ ಗ್ರಾಮೀಣ ಭಾಗದ ರಸ್ತೆಗಳು: ಸರಿಪಡಿಸಲು ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 2:28 IST
Last Updated 18 ಜುಲೈ 2020, 2:28 IST
ತಿಪಟೂರಿನ ಎಪಿಎಂಸಿ ಮಾರುಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಿಲುಕಿರುವುದು
ತಿಪಟೂರಿನ ಎಪಿಎಂಸಿ ಮಾರುಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಿಲುಕಿರುವುದು   

ತಿಪಟೂರು: ನಗರದ ರೈಲ್ವೆ ಗೇಟ್‍ ಬಳಿಯಿಂದ ಎಪಿಎಂಸಿ ಮಾರುಕಟ್ಟೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು, ದಿನವೂ ಹತ್ತಾರು ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ. ಕೂಡಲೇ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರದ ರೈಲ್ವೆ ಗೇಟ್ ಬಳಿಯಿಂದ ಎಪಿಎಂಸಿ ಮಾರುಕಟ್ಟೆಗೆ ದಿನವೂ ನೂರಾರು ವಾಹನಗಳು ಸಂಚರಿಸುತ್ತವೆ. ಅದರಲ್ಲಿಯೂ ಬುಧವಾರ ಮತ್ತು ಶನಿವಾರ ಕೊಬ್ಬರಿ ತುಂಬಿದ ವಾಹನಗಳು ಓಡಾಡುವುದು ಹೆಚ್ಚು. ಅಂತಹ ಸಂದರ್ಭದಲ್ಲಿ ಗುಂಡಿ ಬಿದ್ದು ವಾಹನಗಳು ಸಿಲುಕಿ ಕೊಂಡು ಪರದಾಡುವಂತಾಗಿದೆ. ಅಲ್ಲದೇ ದಿನವೂ ರಸ್ತೆಯಲ್ಲಿ ಕೆಸರು ತುಂಬಿಕೊಂಡು ಹತ್ತಾರು ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರೈಲ್ವೆ ಗೇಟ್‍ನಿಂದ ರಂಗಾಪುರ ಮಾರ್ಗವಾಗಿ ಮತ್ತು ಅನಗೊಂಡನಹಳ್ಳಿ, ಕೆರೆಗೋಡಿ, ದಸರಿಘಟ್ಟದ ಮಾರ್ಗವಾಗಿ ಸುಮಾರು 40 ಹಳ್ಳಿಗಳಿಂದ ಎಪಿಎಂಸಿ ಮಾರುಕಟ್ಟೆಗೆ ಸಂಪಕಿಸುವ ರಸ್ತೆ ಇದಾಗಿದೆ. ಹಲವಾರು ತಿಂಗಳಿನಿಂದ ರಸ್ತೆ ಸರಿ ಇಲ್ಲದ ಕಾರಣದಿಂದ 5- 6 ಕಿ.ಮೀ. ಸುತ್ತಿಕೊಂಡು ಬಂದು ಕೊಬ್ಬರಿ ತೆಗೆದುಕೊಂಡು ಹೋಗುವಂತಾಗಿದೆ. ಆದ್ದರಿಂದ ಕೂಡಲೇ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.