ADVERTISEMENT

ತಿಪಟೂರು | ರಸ್ತೆ ಅಭಿವೃದ್ಧಿ: ಜಾಲತಾಣದಲ್ಲಿ ವಿಡಿಯೊ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:57 IST
Last Updated 19 ಜುಲೈ 2020, 16:57 IST
ತಿಪಟೂರು ತಾಲ್ಲೂಕಿನ ಬಜಗೂರು ಗ್ರಾಮದ ರಸ್ತೆಯ ಸಿಥಿತಿ
ತಿಪಟೂರು ತಾಲ್ಲೂಕಿನ ಬಜಗೂರು ಗ್ರಾಮದ ರಸ್ತೆಯ ಸಿಥಿತಿ   

ತಿಪಟೂರು: ಬಜಗೂರು- ನೊಣವಿನಕೆರೆ ಮಾರ್ಗದ ರಸ್ತೆ ಅಭಿವೃದ್ಧಿಪಡಿಸುವಲ್ಲಿ ಶಾಸಕರು, ಜನಪ್ರತಿನಿಧಿಗಳು ತಾರತಮ್ಯ ತೋರುತ್ತಿದ್ದಾರೆ. ಕೂಡಲೇ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಗ್ರಾಮಸ್ಥರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ತಾಲ್ಲೂಕಿನ ಗಡಿಭಾಗದಲ್ಲಿರುವ ಬಜಗೂರು ಗ್ರಾಮದಿಂದ ನೊಣವಿನಕೆರೆ ಹೋಬಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸಿ 20ರಿಂದ 25 ವರ್ಷ ಕಳೆದಿವೆ. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ತಾಲ್ಲೂಕಿನ ಶಾಸಕರಾಗಲಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗಿಲ್ಲ. ರಸ್ತೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ, ಶಾಸಕರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾರೊಬ್ಬರೂ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮಕ್ಕೆ ಮಲತಾಯಿ ಧೋರಣೆ: ‘ನೊಣವಿನಕೆರೆ ಸುತ್ತಲಿನ ಎಲ್ಲ ಗ್ರಾಮಗಳಿಗೂ ಉತ್ತಮ ರಸ್ತೆ ಮಾಡಿಕೊಟ್ಟಿದ್ದು, ಕೇವಲ ಬಜಗೂರು ಗ್ರಾಮಕ್ಕೆ ಮಾತ್ರವೇ ರಸ್ತೆ ತಡೆಹಿಡಿಯುವಲ್ಲಿ ರಾಜಕೀಯ ದುರುದ್ದೇಶವಿದೆ. ತಿಪಟೂರು ತಾಲ್ಲೂಕಿನ ಹಲವು ಗಡಿ ಭಾಗದ ಗ್ರಾಮಗಳ ರಸ್ತೆಯನ್ನು ಇತರೆ ತಾಲ್ಲೂಕಿನ ಶಾಸಕರು ಅಭಿವೃದ್ಧಿ ಪಡಿಸಿದ್ದಾರೆ. ನಿಮಗೆ ರಸ್ತೆ ಮಾಡಲು ಸಾಧ್ಯವಿಲ್ಲ ಎಂದರೆ ಪಕ್ಕದ ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಬಳಿಯಲ್ಲಿ ರಸ್ತೆ ಮಾಡಿಕೊಡುವಂತೆ ಮನವಿ ಮಾಡುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ರಸ್ತೆ ಅಭಿವೃದ್ಧಿ ಮಾಡದೆ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.