ADVERTISEMENT

ಮನುವಾದ ಜಾರಿಗೆ ಆರ್‌ಎಸ್‌ಎಸ್‌ ಸಜ್ಜು: ಶಿವಸುಂದರ್‌ ಹೇಳಿಕೆ

‘ಮನ-ಮನೆಗೂ ಸಂವಿಧಾನ’ ಕಾರ್ಯಕ್ರಮದಲ್ಲಿ ಶಿವಸುಂದರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:57 IST
Last Updated 23 ನವೆಂಬರ್ 2025, 6:57 IST
ತುಮಕೂರಿನಲ್ಲಿ ಶನಿವಾರ ನಡೆದ ‘ಮನ-ಮನೆಗೂ ಸಂವಿಧಾನ’ ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ಮುಖಂಡರಾದ ಕೃಷ್ಣಪ್ಪ, ಅರುಂಧತಿ, ನ್ಯಾಯಾಧೀಶರಾದ ನೂರುನ್ನೀಸಾ, ಚಿಂತಕ ಕೆ.ದೊರೈರಾಜ್‌, ಸಾಮಾಜಿಕ ಹೋರಾಟಗಾರ ಶಿವಸುಂದರ್‌ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶನಿವಾರ ನಡೆದ ‘ಮನ-ಮನೆಗೂ ಸಂವಿಧಾನ’ ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ಮುಖಂಡರಾದ ಕೃಷ್ಣಪ್ಪ, ಅರುಂಧತಿ, ನ್ಯಾಯಾಧೀಶರಾದ ನೂರುನ್ನೀಸಾ, ಚಿಂತಕ ಕೆ.ದೊರೈರಾಜ್‌, ಸಾಮಾಜಿಕ ಹೋರಾಟಗಾರ ಶಿವಸುಂದರ್‌ ಇತರರು ಉಪಸ್ಥಿತರಿದ್ದರು   

ತುಮಕೂರು: ಆರ್‌ಎಸ್‌ಎಸ್‌ ಮನುವಾದ ಜಾರಿಗೆ ಮುಂದಾಗಿದ್ದು, ಧೃತರಾಷ್ಟ್ರನು ಭೀಮನ ಕಬ್ಬಿಣದ ಮೂರ್ತಿಯನ್ನು ತಬ್ಬಿಕೊಂಡಂತೆ ಸಂವಿಧಾನವನ್ನು ಅಪ್ಪಿಕೊಂಡಿದೆ. ನಾವು ಎಚ್ಚರಿಕೆ ವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್‌ ಹೇಳಿದರು.

ನಗರದಲ್ಲಿ ಶನಿವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ, ಸಂವಿಧಾನ ಸ್ನೇಹಿ ಬಳಗದಿಂದ ಹಮ್ಮಿಕೊಂಡಿದ್ದ ‘ಮನ-ಮನೆಗೂ ಸಂವಿಧಾನ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರ್‌ಎಸ್‌ಎಸ್‌ ಮುಖಂಡರು ದಲಿತರಿಗಿಂತ ಹೆಚ್ಚಾಗಿ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ವಾಸ್ತವದಲ್ಲಿ ಅವರು ಸಂವಿಧಾನ ವಿನಾಶ ಬಯಸುತ್ತಿದ್ದಾರೆ. ಮುಸ್ಲಿಮರು ಈ ದೇಶದವರಲ್ಲ, ದಲಿತರು ನಮಗೆ ಸರಿ ಸಮಾನರಲ್ಲ ಎನ್ನುತ್ತಾರೆ. ಶ್ರೀಮಂತರಿಗೆ ಮಾತ್ರ ಉತ್ತಮ ಶಿಕ್ಷಣ ಸಿಗಬೇಕು. ಬ್ರಾಹ್ಮಣರ ಸಂಖ್ಯೆ ಹೆಚ್ಚಾಗಬೇಕು. ಉಳಿದವರು ಸ್ಲಮ್‌ಗಳಲ್ಲಿಯೇ ಬದುಕಬೇಕು ಎಂಬ ಮನು ಸಿದ್ಧಾಂತ ಜಾರಿಗೊಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಆರ್‌ಎಸ್‌ಎಸ್‌ ವರ್ಷ ಪೂರ್ತಿ ದ್ವೇಷ ಬಿತ್ತುತ್ತಿದೆ. ಇಂತಹ ಸಮಯದಲ್ಲಿ ನಾವು ಮನ- ಮನೆಗೆ ಸಂವಿಧಾನ ತೆಗೆದುಕೊಂಡು ಹೋಗುವುದು ಅಗತ್ಯ. ಎಲ್ಲರಲ್ಲಿ ಪ್ರೀತಿ, ಭ್ರಾತೃತ್ವ, ಬಂಧುತ್ವ ಭಾವ ಬಿತ್ತಬೇಕು. ವರ್ಷ ಪೂರ್ತಿ ಕಾರ್ಯಕ್ರಮಗಳು ನಡೆಯಬೇಕು ಎಂದು ಆಶಿಸಿದರು.

ಸರ್ಕಾರದ ಗ್ಯಾರಂಟಿ ಸುಮ್ಮನೆ ಸಿಕ್ಕಿದ್ದಲ್ಲ. ಉಚಿತ ಎಂಬುವುದು ಯಾವುದೂ ಇಲ್ಲ. ನಮ್ಮ ತೆರಿಗೆ ಹಣ ವಾಪಸ್‌ ಕೊಡುತ್ತಿದ್ದಾರೆ. ಮಹಿಳೆಯರಿಗೆ ತಿಂಗಳಿಗೆ ₹2 ಸಾವಿರ ಕೊಟ್ಟರೆ ತುಂಬಾ ಒಳ್ಳೆಯದು. ಆದರೆ ನಮ್ಮ ಮನೆಗಳ ಅಕ್ಕ–ಪಕ್ಕದಲ್ಲಿಯೇ ಬರಬೇಕಾದ ಅಂಗನವಾಡಿ, ಆಸ್ಪತ್ರೆ ಕಿತ್ತುಕೊಂಡರು. ಪೆಪ್ಪರುಮೆಂಟ್‌ ತೋರಿಸಿ ತಾಳಿ, ಜೇಬಿನಲ್ಲಿ ಇರುವ ₹100 ಕಿತ್ತುಕೊಳ್ಳುತ್ತಿದ್ದಾರೆ. ಇದು ಸಂವಿಧಾನ, ಪ್ರಜಾಪ್ರಭುತ್ವ ಅಲ್ಲ ಎಂದು ಕುಟುಕಿದರು.

ಸಂವಿಧಾನ ಕನಸು ಮಾತ್ರವಲ್ಲ, ಕನಸಿನ ಸಾಧನೆಗೆ ಏಣಿ. 75 ವರ್ಷದಲ್ಲಿ ಕೆಲವರಿಗೆ ಮಾತ್ರ ಆ ಏಣಿ ಸಿಕ್ಕಿದೆ. ಕನಸು ಕಾಣಲು ಆಗದ ಸ್ಥಿತಿಗೆ ನಮ್ಮನ್ನು ದೂಡಿದ್ದಾರೆ. ಸಂವಿಧಾನದ ಆಶಯ ಜಾರಿಗೆ ಆಸಕ್ತಿ ತೋರದವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನ ಅಪ್ಪಿಕೊಂಡು, ಹಕ್ಕು ಕೇಳಬೇಕಾದವರು ಬದುಕಿದರೆ ಸಾಕು ಎಂಬಂತಾಗಿದ್ದಾರೆ. ನಮ್ಮನ್ನು ದೈನೇಸಿ ಸ್ಥಿತಿಯಲ್ಲಿ ಇಟ್ಟಷ್ಟು ದಿನ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ‘ಜಿಲ್ಲೆಯ ಗೊಲ್ಲರ ಹಟ್ಟಿಗಳ‌ ಮಹಿಳೆಯರು ಮೌಢ್ಯ, ಕಂದಾಚಾರದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಟ್ಟು ಹೆಣ್ತನದ ಗೌರವ. ಹಟ್ಟಿಯ ಮಹಿಳೆಯರು ಅದೊಂದು ಶಾಪ, ಕಾಯಿಲೆ ಎಂದು ಭಾವಿಸಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳು ಗರ್ಭಕೋಶ ತೆಗೆಸಿದ್ದಾರೆ. ಅವರಲ್ಲಿ ಜೀವ ಕಳೆ ಸತ್ತು ಹೋಗಿದೆ’ ಎಂದು ವಿಷಾದಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಎ.ನರಸಿಂಹಮೂರ್ತಿ, ಗಿರೀಶ್, ಕೃಷ್ಣಪ್ಪ, ಅರುಂಧತಿ, ಎಂ.ವಿ.ಕಲ್ಯಾಣಿ, ಶಿವಣ್ಣ, ಅನುಪಮಾ, ಪಿ.ಎನ್.ರಾಮಯ್ಯ ಇತರರು ಹಾಜರಿದ್ದರು.

ದ್ವೇಷ ಹರಡುವ

ಆರ್‌ಎಸ್‌ಎಸ್‌ ಆರ್‌ಎಸ್‌ಎಸ್‌ ಮನೆ ಮನೆಗೆ ದ್ವೇಷ ಹರಡುತ್ತಿದೆ. ದೇವರು ಧರ್ಮದ ಹೆಸರಿನಲ್ಲಿ ಜನರ ತಲೆ ಕೆಡಿಸುತ್ತಿದೆ ಎಂದು ಜಿಲ್ಲಾ ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್‌ ಅಸಮಾಧಾನ ವ್ಯಕ್ತಪಡಿಸಿದರು. ಯಾರು ಏನೇ ಹೇಳಿದರೂ ನಾವು ಸಂವಿಧಾನದ ಪರ ಇರಬೇಕು. ಮಹಿಳೆಯರು ಬಡವರು ಎಲ್ಲ ವರ್ಗದವರು ಒಗ್ಗಟ್ಟಾಗಿರಬೇಕು. ಸಂವಿಧಾನ ಹೇಳಿದಂತೆ ಕೇಳಿದರೆ ನಾವೆಲ್ಲ ಸಮಾನತೆ ಕಡೆಗೆ ಹೋಗುತ್ತೇವೆ. ಗೌರವ ಘನತೆಯ ಬದುಕು ನಮ್ಮದಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.