
ತುಮಕೂರು: ದೇಶದಲ್ಲಿ ಕೋಮು ದ್ವೇಷ ಬಿತ್ತಿ, ಜಾತಿ–ಜಾತಿಗಳ ನಡುವೆ ಕೋಮು ಗಲಭೆ ಸೃಷ್ಟಿಸುತ್ತಿರುವ ನೋಂದಣಿಯಾದ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಸಮಿತಿ ಮುಖಂಡರು ಮನವಿ ಸಲ್ಲಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಅಶ್ಲೀಲ ಪದ ಬಳಸಿ, ಜೀವ ಬೆದರಿಕೆ ಹಾಕಿದ ಕಿಡಿಗೇಡಿಗಳನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು. ಉದ್ದೇಶ ಪೂರಕವಾಗಿ ಚಿತ್ತಾಪುರವನ್ನು ಗುರಿಯಾಗಿಸಿಕೊಂಡು ಪಥಸಂಚಲನ ನಡೆಸಲು ಆರ್‌ಎಸ್‌ಎಸ್ ಮುಂದಾಗಿದ್ದು, ಅದಕ್ಕೆ ಸರ್ಕಾರ ಅನುಮತಿ ನೀಡಬಾರದು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್, ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಬಿ.ಆರ್.ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಸಿದರು. ಆರ್‌ಎಸ್‌ಎಸ್ ಅಪಾಯಕಾರಿ ಸಂಘಟನೆ ಎಂದು ಘೋಷಿಸಿದ್ದರು. 1950 ಜ. 26ರಂದು ಸಂವಿಧಾನ ಜಾರಿಯಾದಾಗ ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಜರ್’ನಲ್ಲಿ ‘ಭಾರತದ ಸಂವಿಧಾನದಲ್ಲಿ ಏನೂ ಇಲ್ಲ. ಮನುಸ್ಮೃತಿ ಪ್ರಾಚೀನವಾದದ್ದು, ಜಗತ್ತಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಬರೆದಿತ್ತು. ಮನುವಾದಿಗಳು ಮನುಸ್ಮೃತಿಯನ್ನು ಪೂಜಿಸಿ ಸಂವಿಧಾನವನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತಾ ಬಂದಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ಜಾರಿಯಾಗಲು ಬಿಡದೆ ಹಿಂದೂ ಕೋಡ್ ಬಿಲ್ ಪ್ರತಿಯನ್ನು ಸುಟ್ಟು ಹಾಕಲಾಯಿತು. ಈಗ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯುವ ಪ್ರಯತ್ನ ನಡೆಯಿತು. ಜಾಲ ತಾಣದಲ್ಲಿ ಇದನ್ನು ಬಿಜೆಪಿ, ಆರ್‌ಎಸ್‌ಎಸ್ ಬೆಂಬಲಿಗರು ಬೆಂಬಲಿಸುತ್ತಿದ್ದಾರೆ. ಮನುಸ್ಮೃತಿ ಜಾರಿ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
ಸಂಘಟನೆ ಮುಖಂಡರಾದ ಕುಂದೂರು ಮುರುಳಿ, ವಿರೂಪಾಕ್ಷ ಡ್ಯಾಗೇರಹಳ್ಳಿ, ಕುಪ್ಪೂರ ಶ್ರೀಧರ್, ಬಿ.ಆರ್.ಕೃಷ್ಣಸ್ವಾಮಿ, ಕೆಸ್ತೂರು ನರಸಿಂಹಮೂರ್ತಿ, ಚಂದ್ರಶೇಖರ್ ಗಡಬನಹಳ್ಳಿ, ದಯಾನಂದ್, ಮಂಜು ಗೊಲ್ಲಹಳ್ಳಿ, ಉಗ್ರನರಸಿಂಹಯ್ಯ, ತ್ರಿನೇಶ್, ರಾಯಣ್ಣ ಇತರರು ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.