ಕುಣಿಗಲ್: ತಾಲ್ಲೂಕಿನ ಮೂರು ಗ್ರಾಮೀಣ ಪ್ರದೇಶದ ಶಾಲೆಗಳ ಉಳಿವಿಗಾಗಿ ಮತ್ತು ದಾಖಲಾತಿ ಹೆಚ್ಚಳಕ್ಕಾಗಿ ಹಳೆ ವಿದ್ಯಾರ್ಥಿಗಳು ಸಂಘಟಿತರಾಗಿ ರಚಿಸಿಕೊಂಡ ಸಂಘಗಳು ಮತ್ತು ಕಾಡಶೆಟ್ಟಿಹಳ್ಳಿ ಯ ಧೈತ್ಯಮಾರಮ್ಮ ದೇವಾಲಯದ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದಾರೆ.
ತಾವು ಕಲಿತ ಶಾಲೆ ತಮ್ಮ ಕಣ್ಣ ಮುಂದೆಯೇ ದಾಖಲಾತಿ ಕ್ಷೀಣಿಸಿ ಮುಚ್ಚವ ಹಂತಕ್ಕೆ ತಲುಪುತ್ತಿರುವುದನ್ನು ಕಂಡ ಹಳೆ ವಿದ್ಯಾರ್ಥಿಗಳು ಶಾಲೆಯ ಉಳಿವಿಗಾಗಿ ಸುತ್ತಮುತ್ತಲಿನ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿದಾಗ ಪೋಷಕರ ಆಂಗ್ಲಭಾಷಾ ವ್ಯಾಮೋಹದ ಜತೆಗೆ ಪೂರ್ವ ಪ್ರಾಥಮಿಕ ತರಗತಿಗಳ ಬಗ್ಗೆ ಒಲವು ತೋರಿದ ಕಾರಣ ಪೂರ್ವ ಪ್ರಾಥಮಿಕ ತರಗತಿಗಳನ್ನು ಮತ್ತು ಆಂಗ್ಲ ಭಾಷಾ ಭೋಧನೆ ಪ್ರಾರಂಭಿಸುವುದರ ಜತೆಗೆ ಪಟ್ಟಣಕ್ಕೆ ಬಸ್ ನಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಸೆಳೆಯಲು ತಾವುಗಳೇ ಸೇರಿ ಟ್ರಸ್ಟ ಮೂಲಕ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದಾರೆ.
ತಾಲ್ಲೂಕಿನ ಅಮೃತೂರು ಹೋಬಳಿಯ ಕಾಡಶೆಟ್ಟುಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧೈತ್ಯಮಾರಮ್ಮ ದೇವಾಲಯ ಟ್ರಸ್ಟ್ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. 2019ರಲ್ಲಿ ಶಾಲೆಯ ದಾಖಲಾತಿ 4ಕ್ಕೆ ಇಳಿದಿದ್ದು. ಟ್ರಸ್ಟ್ ವತಿಯಿಂದ ಗ್ರಾಮೀಣ ಪ್ರದೇಶದ ಜನತೆಯೊಂದಿಗೆ ಚರ್ಚೆ ನಡೆಸಿ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲೆಯ ಸಮಗ್ರ ಅಭಿವೃದ್ಧಿಗೆ ಕ್ರಮತೆಗೆದುಕೊಂಡ ಕಾರಣ ಪ್ರಸ್ತುತ ಸಾಲಿನಲ್ಲಿ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಶಾಲೆಗೆ ನಾಗಮಂಗಲ ತಾಲ್ಲೂಕಿನ ಹತ್ತಾರು ಹಳ್ಳಿಯ ಮಕ್ಕಳು ದಾಖಲಾಗಿರುವುದು ಒಂದು ವಿಶೇಷ. ನಾಗಮಂಗಲ ಕಡೆಯಿಂದ 43 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಬಸ್ ವ್ಯವಸ್ಥೆ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ದೇವಾಲಯದ ಟ್ರಸ್ಟ್ ನವರೆ ವಹಿಸಿಕೊಂಡಿರುವುದರ ಜತೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಕಂಪ್ಯೂಟರ್ ಶಿಕ್ಷಣ ಮತ್ತು ಆಂಗ್ಲಭಾಷಾ ಭೋಧನೆಗೆ ಕ್ರಮತೆಗೆದುಕೊಂಡಿದ್ದಾರೆ.
ಇನ್ನೂ ಎಡೆಯೂರು ಹೋಬಳಿಯ ದೊಡ್ಡಮಧುರೆ ಗ್ರಾಮದ ಸರ್ಕಾರಿ ಶಾಲೆಗೆ ಹಳೆ ವಿದ್ಯಾರ್ಥಿಗಳು ಸೇರಿ ಮೈತ್ರಿ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆ ಮಾಡಿಕೊಂಡಿದ್ದು, ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಸಂಘದ ಧ್ಯಕ್ಷ ಡಿ.ಎಸ್.ಪ್ರಕಾಶ್ ವಿದ್ಯಾರ್ಥಿಗಳು ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಿದ್ದು, ನಿರ್ವಹಣೆಯ ಜವಾಬ್ದಾರಿ ಸಂಘವೇ ಹೊತ್ತಿದೆ. ಎಡೆಯೂರು ಹೋಬಳಿ ಸೇರಿದಂತೆ ತುರುವೇಕೆರೆ ತಾಲ್ಲೂಕಿನ ಗಡಿ ಭಾಗವಾದ ಬಾನಿಪಾ:ಳ್ಯ, ಗೈನಾಪುರ ಮತ್ತು ನರಿಗೆಹಳ್ಳಿಯಿಂದಲೂ ವಿದ್ಯಾರ್ಥಿಗಳು ದಾಖಲಾಗಿ ಬಸ್ ವ್ಯವಸ್ಥೆಯ ಅನುಕೂಲ ಪಡೆದಿದ್ದಾರೆ
ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಜಾಣಗೆರೆ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳು ಸೇರಿ ಜ್ಞಾನಜ್ಯೋತಿ ಎಜ್ಯುಕೇಷನಲ್ ಚಾರಿಟಬಲ್ ಟ್ರಸ್ಟ್ ಮೂಲಕ ಬಸ್ ವ್ಯವಸ್ಥೆ ಮಾಡಿದರ ಫಲವಾಗಿ ಶಾಲಾ ದಾಖಲಾತಿ ಹೆಚ್ಚಳವಾಗಿದೆ.
ತಾಲ್ಲೂಕಿನ ಕೊತ್ತಗೆರೆ ಹೋಬಳಿ ಗುನ್ನಾಗರೆ ಗ್ರಾಮದ ಸರ್ಕಾರಿ ಶಾಲೆಗೆ ಹಳೆ ವಿದ್ಯಾರ್ಥಿಗಳು ಸೇರಿ ವಿನಾಯಕ ಸೇವಾ ಟ್ರಸ್ಟ್ ರಚನೆ ಮಾಡಿಕೊಂಡು ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ವ್ಯವಸ್ಥೆ ಮಾಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.