
ತುರುವೇಕೆರೆ: ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟು ಗುಂಡಿಮಯವಾಗಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣಕಿವುಡರಾಗಿದ್ದಾರೆ.
ತಾಲ್ಲೂಕಿನಲ್ಲಿ 243 ಗ್ರಾಮಗಳಿವೆ. ಹೊಸದಾಗಿ 89 ಗ್ರಾಮಗಳನ್ನು ಸರ್ವೆ ಇಲಾಖೆ ಗುರುತಿಸಿದೆ. 36 ಜಿಲ್ಲಾ ಮುಖ್ಯ ರಸ್ತೆಗಳಿವೆ. ಬೋಚಿಹಳ್ಳಿಯಿಂದ ಟಿ.ಬಿ.ಕ್ರಾಸ್ ಹಾವಾಳ, ತಿಪಟೂರು ರಸ್ತೆ, ಪಟ್ಟಣದ ದಬ್ಬೇಘಟ್ಟ ವೃತ್ತದಿಂದ ಕದಬಹಳ್ಳಿ ಹೆದ್ದಾರಿ, ಸೀಗೇಹಳ್ಳಿಯಿಂದ ನಿಟ್ಟೂರು ರಸ್ತೆ, ಸಿ.ಎಸ್.ಪುರ ಎಡೆಯೂರುವರೆಗೆ ನಾಲ್ಕು ರಾಜ್ಯ ಹೆದ್ದಾರಿಗಳಿವೆ. ಜೋಡುಗಟ್ಟೆಯಿಂದ ಬಾಣಸಂದ್ರವರೆಗೆ 150–ಎ ರಾಷ್ಟ್ರೀಯ ಹೆದ್ದಾರಿ ಇದೆ.
ಗ್ರಾಮೀಣ ಪ್ರದೇಶದ ಸಾಕಷ್ಟು ರಸ್ತೆಗಳು ಸ್ವಾತಂತ್ರ್ಯ ನಂತರ ನಿರ್ಮಾಣವಾಗಿವೆ. ರಸ್ತೆಯ ಎರಡೂ ಕಡೆ ಮಳೆಗೆ ಕೊರಕಲು ಉಂಟಾಗಿ ಮಧ್ಯದಲ್ಲಿ ಮಾತ್ರ ಡಾಂಬರ್ ಕಾಣಿಸುತ್ತದೆ. ಇತ್ತೀಚೆಗೆ ನಿರ್ಮಿಸಿದ ರಸ್ತೆಗಳು ಕಳೆಪೆಯಾಗಿ ಕಿತ್ತು ಹೋಗಿವೆ. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲೂ ಗಂಡಿಗಳದ್ದೇ ದರ್ಬಾರ್ ಆಗಿದೆ.
ಪಟ್ಟಣದ ಬಹುಪಾಲು ರಸ್ತೆಗಳು ಕಿತ್ತುಹೋಗಿವೆ. ಯುಜಿಡಿ ಕಾಮಗಾರಿಗೆಂದು ರಸ್ತೆ ನಡುವೆ ಅಗೆದ ಗುಂಡಿಯನ್ನು ಸರಿಯಾಗಿ ಮುಚ್ಚಿಲ್ಲ. ಅಮೃತ್ -2 ಯೋಜನೆಯಡಿ ಪೈಪ್‌ಲೈನ್ ಕಾಮಗಾರಿಗಾಗಿ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಅಗೆಯಲಾಗಿದೆ. ಮಳೆ ಬಂದರೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಕಸಬಾ ಹೋಬಳಿ: ತೊರೆಮಾವಿನಹಳ್ಳಿ ಗೇಟ್‌ನಿಂದ ತೊರೆಮಾವಿನಹಳ್ಳಿ ಮಾಳೆ, ಆನೇಕೆರೆ ತನಕ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿದ್ದು ಜನ ಸಂಚಾರ ಕಷ್ಟವಾಗಿದೆ. ಕುಂದೂರು ಪಾಳ್ಯದಿಂದ ಬೊಮ್ಮೇನಹಳ್ಳಿ ಎ.ಹೊಸಹಳ್ಳಿ ತಿಪಟೂರು ರಸ್ತೆ, ಬಾಣಸಂದ್ರ ವೆಂಕಟಾಪುರ ರೈಲ್ವೇಗೇಟ್ ತಿಪಟೂರು ರಸ್ತೆ, ಎನ್. ಗಂಗನಹಳ್ಳಿ ಗೇಟ್‌ನಿಂದ ಪಿ.ಕಲ್ಲಹಳ್ಳಿ ಕ್ರಾಸ್, ಎನ್.ಮಂಚೇನಹಳ್ಳಿ ಮೂಲಕ ನೀರುಗುಂದ–ವೆಂಕಟಾಪುರ ಮತ್ತು ಬಾಣಸಂದ್ರದ ತನಕ, ಲೋಕಮ್ಮನಹಳ್ಳಿ ಗೇಟ್‌ನಿಂದ ಪ್ರಾರಂಭವಾಗಿ ಮಂತ್ರಿಕೇನಹಳ್ಳಿ ಗೊಲ್ಲರಹಟ್ಟಿವರೆಗೆ, ಮರಾಠಿ ಪಾಳ್ಯದಿಂದ ಕುಣಿಕೇನಹಳ್ಳಿ ತುರುವೇಕೆರೆ, ಎನ್ ಮಂಚೇನಹಳ್ಳಿ- ರಾಮಡಿಹಳ್ಳಿ ಮುನಿಯೂರಿನಿಂದ ಕೊಂಡಜ್ಜಿ ಕ್ರಾಸ್, ಕೊಂಡಜ್ಜಿ ಕ್ರಾಸ್‌ನಿಂದ ಪುರ-ಚಂಡೂರ್ ರಸ್ತೆ, ಅರಳೀಕೆರೆ-ತಾಳ್ಕೆರೆ, ಪಾಳ್ಯ ಗೇಟ್‌ನಿಂದ- ಅರಳೀಕೆರೆ ರಸ್ತೆ ದುರಸ್ತಿಯಾಗಬೇಕಿದೆ.
ದಂಡಿನಶಿವರ: ತುರುವೇಕೆರೆಯಿಂದ ದಂಡಿನಶಿವರ-ಹುಲ್ಲೇಕೆರೆ ಕೊಂಡ್ಲಿ ಕ್ರಾಸ್ ರಸ್ತೆ, ಹಡವನಹಳ್ಳಿಯಿಂದ ಅಮ್ಮಸಂದ್ರ ಕೊಂಡ್ಲಿ ಕ್ರಾಸ್‌ವರೆಗೆ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು, ಮಧ್ಯೆ ದೊಡ್ಡ ಗುಂಡಿಗಳು ಬಿದ್ದಿವೆ. ಹೆಗ್ಗೆರೆ-ಹೊಸಹಳ್ಳಿ, ದಂಡಿನಶಿವರದಿಂದ ಸಂಪಿಗೆ ಹೋಗುವ ಮಧ್ಯೆ ಅಲ್ಲಲ್ಲಿ ರಸ್ತೆ ಹಾಳಾಗಿದೆ. ಸಾರಿಗೆ ಕೆರೆ ಕೋಡಿ, ಮಾಚೇನಹಳ್ಳಿ ವಯಾ –ರಾಮಡಿಹಳ್ಳಿ ದಂಡಿನಶಿವರ ಕೆರೆ ಏರಿ ರಸ್ತೆ ಅದ್ವಾನವಾಗಿದೆ. ದಂಡಿನಶಿವರ- ಆದಿತ್ಯಪಟ್ಟಣ, ಕೊಂಡಜ್ಜಿ ಕ್ರಾಸ್ ಮೂಲಕ ಸಾಗುವ ತೋವಿನಕೆರೆ ಸಂಪಿಗೆ ರಸ್ತೆ ಗುಂಡಿ ಮುಚ್ಚಿಲ್ಲ. ಹರಿಕಾರನಹಳ್ಳಿ ಗೇಟ್‌ನಿಂದ ಅಕ್ಕಳಸಂದ್ರ ಗೊಲ್ಲರಹಟ್ಟಿ ಬೀಚನಹಳ್ಳಿ ಗೇಟ್ ಹಾಗೂ ದೊಂಬರನಹಳ್ಳಿ ಗೇಟ್‌ನಿಂದ ತೋವಿನಕೆರೆ ರಸ್ತೆ ಕೆಸರಿನ ಜಾಡಾಗಿದೆ. ಸೊಪ್ಪನಹಳ್ಳಿ ಮಾರ್ಗದಿಂದ ದೊಂಬರನಹಳ್ಳಿ, ಡಿ.ಶೆಟ್ಟಿಹಳ್ಳಿ, ಚಿಮ್ಮನಹಳ್ಳಿ ಮತ್ತು ದೊಡ್ಡ ಗೊರಾಘಟ್ಟ ವರೆಗೆ ರಸ್ತೆ ಕಿತ್ತುಹೋಗಿದೆ. ಶೆಟ್ಟಿಹಳ್ಳಿ-ದೊಂಬರನಹಳ್ಳಿ ಮಣ್ಣಿನ ರಸ್ತೆ ಹಾಳಾಗಿ ಜನರ ಸಂಪರ್ಕವೇ ಕಡಿತಗೊಂಡಿದೆ.
ಮಾಯಸಂದ್ರ ಹೋಬಳಿ: ಟಿ.ಬಿ.ಕ್ರಾಸ್‌ನಿಂದ ದೊಡ್ಡೇರಿ ಮಣೆಚಂಡೂರು, ಸೀಗೆಹಳ್ಳಿಯ 12 ಕಿ.ಮೀ ರಸ್ತೆ ಅಪಾಯಕಾರಿ ಗುಂಡಿಗಳಿಂದ ಕೂಡಿದೆ. ಮಣೆ ಚಂಡೂರು- ಶೆಟ್ಟಿಗೊಂಡನಹಳ್ಳಿ ರಸ್ತೆ ಉದ್ದಕ್ಕೂ ಅಗಲವಾದ ಗುಂಡಿಗಳೇ ಸಿಗುತ್ತವೆ. ಚಿಕ್ಕಬೀರನ ಕೆರೆಯಿಂದ ಭೈತರಹೊಸಹಳ್ಳಿ, ವಡವನಘಟ್ಟದಿಂದ ಕುಪ್ಪೂರು, ಅಂಗಡಿಗೆರೆ, ದೊಡ್ಡಮಾರ್ಗೋನಹಳ್ಳಿ ಅಜ್ಜನಹಳ್ಳಿ ತನಕ ರಸ್ತೆ ಕಿತ್ತು ಹೋಗಿದೆ. ವಡವನಘಟ್ಟದಿಂದ ಮುಗಳೂರು, ಗಿಡ್ಡನಪಾಳ್ಯ-ತಾಳ್ಕೆರೆ, ಜೋಡುಗಟ್ಟೆಯಿಂದ ಢಣನಾಯಕನಪುರ ಭೈತರ ಹೊಸಹಳ್ಳಿ ಸಂಪರ್ಕಿಸುವ ರಸ್ತೆ, ದಾಸಿಹಳ್ಳಿಗೇಟ್‌ನಿಂದ ತರಮನಕೋಟೆ ಗಡಿಭಾಗದವರಗೆ ರಸ್ತೆ ಸರಿಪಡಿಸಬೇಕಿದೆ.
ದಬ್ಬೇಘಟ್ಟ ಹೋಬಳಿ: ಮಾಯಸಂದ್ರದಿಂದ ಮೇಲಿನ ವಳಗೇರಹಳ್ಳಿ ಕಡೇಹಳ್ಳಿ ಲಿಂಕ್ ರಸ್ತೆ ಕಿತ್ತು ಹೋಗಿದೆ. ಮಾವಿನಕೆರೆಮಾರ್ಗದಿಂದ ಕಲ್ಲನಾಗತಿಹಳ್ಳಿ ಮಾಯಸಂದ್ರ ರಸ್ತೆ ನಿರ್ಮಾಣವಾಗಿ ಕೆಲವೇ ವರ್ಷದಲ್ಲಿ ಕಳಪೆ ಕಾಮಗಾರಿಯಿಂದ ಡಾಂಬರ್ ಕಿತ್ತು ಹೋಗಿದೆ. ಚಿಕ್ಕಪುರ ಗೇಟ್ ಮಾರ್ಗದಿಂದ ಮುತ್ತಗದಹಳ್ಳಿ, ಒಬ್ಬೇನಾಗಸಂದ್ರ ಮುದಿಗೆರೆ ಮತ್ತು ಮಾವಿನಕೆರೆಗೆ ಸಂಪರ್ಕಿಸುವ ರಸ್ತೆ ಡಾಂಬರ್ ಕಿತ್ತು ಅಲ್ಲಲ್ಲಿ ಗುಂಡಿ ಬಿದ್ದಿವೆ. ಬದ್ರಿಕಾಶ್ರಮ-ಬೆಂಕಿಕೆರೆ, ನಾಗಲಾಪುರ ಮಾರ್ಗದಿಂದ ಕೆ.ಹೊಸೂರು, ದೇವನಾಯಕನಹಳ್ಳಿ ಜೆ.ಸಿ.ನಗರ ಕೂಡು ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ
ನಾಲ್ಕು ಪಥ ನಿರ್ಮಿಸಿ
150–ಎ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಗುತ್ತಿಗೆದಾರರು ಲೋಕಮ್ಮನಹಳ್ಳಿಯಲ್ಲಿ ನಿರ್ಮಿಸಿರುವ ಬಾಕ್ಸ್ ಚರಂಡಿ ಕಾಮಗಾರಿ ಕಳಪೆಯಾಗಿದೆ. ಕಿರಿದಾದ ದ್ವಿಪಥ ವಿಸ್ತರಣೆಗೆ ರಸ್ತೆ ಬದಿಯ ಸಾವಿರಾರು ಮರಗಳನ್ನು ಕಡಿಯುವ ಅವಶ್ಯಕತೆ ಏನಿತ್ತು. ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು ಕೂಡಲೇ ನಿಲ್ಲಿಸಿ ನಾಲ್ಕು ಪಥ ಮಾಡಬೇಕು ಎಂದು ಲೋಕಮ್ಮನಹಳ್ಳಿ ಕಾಂತರಾಜು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.