
ತುಮಕೂರು: ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ನ. 22ರಂದು ನಡೆಯಲಿದೆ ಎಂದು ಸಾಹೇ ವಿ.ವಿ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಇಲ್ಲಿ ಗುರುವಾರ ತಿಳಿಸಿದರು.
ನಗರದ ಹೊರ ವಲಯದ ಅಗಳಕೋಟೆಯಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಘಟಿಕೋತ್ಸವ ನಡೆಯಲಿದ್ದು, ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದ, ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಸಾಹೇ ವಿ.ವಿ ಕುಲಾಧಿಪತಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಿದ್ದಾರೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರ, ಡಾ.ಜಿ.ಎಸ್.ಆನಂದ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವೈದ್ಯಕೀಯ 3, ದಂತ ವೈದ್ಯಕೀಯ 2, ಎಂಜಿನಿಯರಿಂಗ್ 8, ಎಂಸಿಎ– ಎಂಟೆಕ್ 2 ಸೇರಿದಂತೆ 15 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 14 ಮಂದಿಗೆ ಪಿಎಚ್.ಡಿ ಪದವಿ, ಇಬ್ಬರಿಗೆ ಫೆಲೋಶಿಪ್ ಪ್ರದಾನ ಮಾಡಲಾಗುತ್ತದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ 1,086 ಅಭ್ಯರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ ಎಂದು ವಿವರಿಸಿದರು.
ಸಾಹೇ ವಿ.ವಿ ಕುಲಸಚಿವ ಅಶೋಕ್ ಮೆಹತಾ, ಪರೀಕ್ಷಾಂಗ ವಿಭಾಗದ ನಿಯಂತ್ರಕ ಸಿ.ಗುರುಶಂಕರ್, ದಂತ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಬಿ.ಪ್ರವೀಣ್ ಕುಡುವ, ಉಪ ಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್, ಉಪ ಕುಲಸಚಿವ ಸುದೀಪ್ ಕುಮಾರ್, ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.