ಶಿರಾ: ತಾಲ್ಲೂಕಿನ ಎಪಿಎಂಸಿಗೆ ₹10 ಕೋಟಿ ವೆಚ್ಚದ ಕೋಲ್ಡ್ ಸ್ಟೋರೇಜ್ (ಶೀಥಲ ಘಟಕ) ಮಂಜೂರಾಗಿದ್ದು ಇದು ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್.ಶಶಿಧರ್ ಗೌಡ ಹೇಳಿದರು.
ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಮುಗಿದ ತಕ್ಷಣ ಕಾಮಗಾರಿ ಆರಂಭವಾಗುವುದು ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಶಾಸಕ ಟಿ.ಬಿ.ಜಯಚಂದ್ರ ಅವರ ಪರಿಶ್ರಮವೇ ಕಾರಣ ಎಂದರು.
20 ಎಕರೆ ಜಮೀನು ಮಂಜೂರು: ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ವಿಸ್ತರಿಸುವ ದೃಷ್ಟಿಯಿಂದ 20 ಎಕರೆ ಜಮೀನು ಮಂಜೂರು ಮಾಡಿಸಲಾಯಿತು. ಈಗ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಹುಣಸೆ ಹಣ್ಣು ಬೆಳೆಯುತ್ತಿದ್ದು ಸೂಕ್ತ ಬೆಲೆ ದೊರೆಯದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆಂಧ್ರಪ್ರದೇಶದ ಹಿಂದೂಪುರ ಮತ್ತು ಪುಂಗನೂರು ಭಾಗದಿಂದ ಬರುವ ವರ್ತಕರು ಕಡಿಮೆ ದರಕ್ಕೆ ಹುಣಸೆ ಹಣ್ಣು ಖರೀದಿ ಮಾಡುತ್ತಾರೆ. ಹಲವಾರು ಬಾರಿ ರೈತರಿಗೆ ಹಣ ನೀಡದೆ ಮೋಸ ಮಾಡುತ್ತಿದ್ದಾರೆ. ಈಗ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗುವುದರಿಂದ ರೈತರು ಹಣ್ಣು ಅಲ್ಲಿ ಸಂಗ್ರಹಿಸಿಟ್ಟು ಬೆಲೆ ಬಂದಾಗ ಮಾರಾಟ ಮಾಡಬಹುದು ಎಂದರು.
ಇಲ್ಲಿ ಹುಣಸೆ, ಟೊಮೆಟೊ, ಮಾವು, ಹಲಸು ಸೇರಿದಂತೆ ತರಕಾರಿ, ಹಣ್ಣು, ಹೂವುಗಳನ್ನು ದೀರ್ಘಕಾಲ ಇಡಬಹುದಾಗಿದೆ. ರೈತರಿಗೆ ಹೆಚ್ಚಿನ ಲಾಭವಾಗುತ್ತದೆ. ಎಪಿಎಂಸಿಗೆ ಮಂಜೂರಾಗಿರುವ 20 ಎಕರೆ ಜಮೀನನ್ನು ಕೆಲ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ತಾಲ್ಲೂಕಿನ ರೈತರ ಹಿತಕ್ಕಾಗಿ ರೈತರು ಕಾಮಗಾರಿಗೆ ಅಡ್ಡಿ ಮಾಡದೆ ಸ್ವಪ್ರೇರಣೆಯಿಂದ ಬಿಟ್ಟುಕೊಡುವಂತೆ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ನಗರಸಭೆ ಸದಸ್ಯ ಬಿ.ಎಂ.ರಾಧಾಕೃಷ್ಣ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ಮುಕುಂದಪ್ಪ, ಮೊಸರಕುಂಟೆ ರಾಜಣ್ಣ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.